ಅಕ್ಷರ ಗಾತ್ರ

ಪ್ರೀತಿಸಿ ಮದುವೆಯಾಗಿ 5 ವರ್ಷ ಸಂಸಾರ; ಗುಟ್ಟಾಗಿ ಮತ್ತೊಂದು ಮದುವೆಯಾದ ಪತಿ ವಿರುದ್ಧ ಪತ್ನಿ ದೂರು!

ಬೆಂಗಳೂರು ನಗರದಲ್ಲಿ ಎರಡನೇ ಮದುವೆಯಾಗಿ ವಂಚಿಸಿದ ಆರೋಪ ಎದುರಿಸುತ್ತಿರುವ ಮೊಹಮ್ಮದ್ ಸದಾಕತ್ ಅಲಿ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತಿ ಗುಟ್ಟಾಗಿ ಮತ್ತೊಂದು ಮದುವೆಯಾಗಿರುವ ಆರೋಪ ಕೇಳಿಬಂದಿದೆ.

ಇಬ್ಬರು ಮಕ್ಕಳ ತಾಯಿಯನ್ನು ಎರಡನೇ ಮದುವೆಯಾಗುವ ಮೂಲಕ ತನಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮೊದಲ ಪತ್ನಿ ನ್ಯಾಯಕ್ಕಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಮೆಟ್ಟಿಲೇರಿದ್ದಾರೆ. ಈ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೊಹಮ್ಮದ್ ಸದಾಕತ್ ಅಲಿ ಎಂಬಾತನ ವಿರುದ್ಧ ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ತಂದೆ-ತಾಯಿ ಇಲ್ಲದ ಅನಾಥೆಯಾಗಿದ್ದ ಮಹಿಳೆಗೆ ಸುಮಾರು 10 ವರ್ಷಗಳ ಹಿಂದೆ ಕಾವಲಭೈರಸಂದ್ರದಲ್ಲಿ ಸ್ನೇಹಿತರ ಮನೆಗೆ ಹೋದಾಗ ಮೊಹಮ್ಮದ್ ಸದಾಕತ್ ಅಲಿಯ ಪರಿಚಯವಾಗಿತ್ತು. ಬಳಿಕ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಸುಮಾರು 10 ವರ್ಷಗಳ ಕಾಲ ಪ್ರೀತಿಸಿದ್ದ ಅವರು, ಐದು ವರ್ಷಗಳ ಹಿಂದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದರು.

ಈ ಮದುವೆಗೆ ಮೊಹಮ್ಮದ್‌ನ ಸ್ನೇಹಿತ ಅನಿಲ್ ಕುಮಾರ್ ಹಾಗೂ ಅವರ ಪತ್ನಿ ಸಾಕ್ಷಿಯಾಗಿ ಸಹಿ ಹಾಕಿದ್ದರು. ಆದರೆ, ಮದುವೆಯ ವಿಚಾರವನ್ನು ಮೊಹಮ್ಮದ್ ತನ್ನ ಕುಟುಂಬದವರಿಗೆ ತಿಳಿಸಿರಲಿಲ್ಲ. ಬಳಿಕ ದಂಪತಿ ಕಲ್ಯಾಣನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು.

ಒಂದು ತಿಂಗಳಿಂದ ಮನೆಗೆ ಬಾರದ ಪತಿ!

ಕಳೆದ ಒಂದು ತಿಂಗಳಿನಿಂದ ಮೊಹಮ್ಮದ್ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಪತ್ನಿ, ಮನೆಗೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿ ಗಂಡನೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಮೊಹಮ್ಮದ್ ಅಸಲಿ ವಿಚಾರ ಬಾಯಿಬಿಟ್ಟಿದ್ದಾನೆ. ಈಗಾಗಲೇ ಇಬ್ಬರು ಮಕ್ಕಳಿರುವ ಮತ್ತೊಬ್ಬ ಮಹಿಳೆಯನ್ನು ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆಯೇ ಮೊಹಮ್ಮದ್ ಎರಡನೇ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈ ವಿಚಾರ ತಿಳಿದ ಮೊದಲ ಪತ್ನಿ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಅವರು, ಇದೀಗ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಪ್ರೀತಿಸಿ ಮದುವೆಯಾದ ಪತಿಯೇ ಮತ್ತೊಂದು ಮದುವೆಯಾಗಿ ವಂಚಿಸಿದ್ದಾರೆ ಎಂಬ ಸಂತ್ರಸ್ತೆಯ ಆರೋಪ ಇದೀಗ ಬೆಳಕಿಗೆ ಬಂದಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.