ಮಂಡ್ಯ: ಸ್ನೇಹಿತನೊಂದಿಗೆ ಸೇರಿಕೊಂಡು 55 ವರ್ಷದ ಅಜ್ಜಿಯನ್ನು ಕೊಲೆ ಮಾಡಿದ ಆರೋಪ 16 ವರ್ಷದ ಮೊಮ್ಮಗಳ ವಿರುದ್ಧ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹದೇವಮ್ಮ (55) ಕೊಲೆಯಾದ ವೃದ್ಧೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ 16 ವರ್ಷದ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಸ್ನೇಹಿತ ಆಕಾಶ್ (23) ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಕೆ.ಆರ್. ಪೇಟೆ ಪೊಲೀಸರು ತಿಳಿಸಿದ್ದಾರೆ.
ಬುದ್ಧಿವಾದ ಹೇಳಿದ್ದಕ್ಕೆ ಕೊಲೆ ಆರೋಪ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿ ಹಾಗೂ ಆಕಾಶ್ ನಡುವೆ ಆತ್ಮೀಯತೆ ಇತ್ತು. ಇಬ್ಬರೂ ಒಟ್ಟಿಗೆ ಇರುವುದನ್ನು ಗಮನಿಸಿದ್ದ ಮಹದೇವಮ್ಮ, ಮೊಮ್ಮಗಳಿಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಬಾಲಕಿ, ಅಜ್ಜಿಯನ್ನು ಕೊಲೆ ಮಾಡುವ ಉದ್ದೇಶದಿಂದ ಆಕಾಶ್‌ನನ್ನು ಮನೆಗೆ ಕರೆಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ.

ಮನೆಗೆ ಬಂದ ಆಕಾಶ್, ಮಲಗಿದ್ದ ಮಹದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅವರು ಕಿರುಚದಂತೆ ಬಾಯಿಗೆ ಬಟ್ಟೆ ತುರುಕಿ, ಬಳಿಕ ಬಾಲಕಿ ನೀಡಿದ ವೇಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕೃತ್ಯದ ಬಳಿಕ ಆಕಾಶ್ ಸ್ಥಳದಿಂದ ಪರಾರಿಯಾಗಿದ್ದರೆ, ಬಾಲಕಿ ಏನೂ ತಿಳಿಯದಂತೆ ಮಲಗಲು ತೆರಳಿದ್ದಳು ಎನ್ನಲಾಗಿದೆ. ನಂತರ ಮನೆಗೆ ಬಂದ ಸಂಬಂಧಿಕರು ಮಹದೇವಮ್ಮ ಮೃತಪಟ್ಟಿರುವುದನ್ನು ಗಮನಿಸಿದ್ದಾರೆ.
ಸಹಜ ಸಾವು ಎಂದು ಭಾವಿಸಿದ್ದ ಕುಟುಂಬ
ಆರಂಭದಲ್ಲಿ ಮಹದೇವಮ್ಮ ಅವರ ಸಾವನ್ನು ಕುಟುಂಬಸ್ಥರು ಸಹಜ ಸಾವು ಎಂದು ಭಾವಿಸಿದ್ದರು. ಆದರೆ, ಅವರ ಕತ್ತಿನ ಭಾಗದಲ್ಲಿ ಕೆಲವು ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಹೇಳಿದ್ದೇನು?
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ, ಕೆ.ಆರ್. ಪೇಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೂಕನಕೆರೆ ಗ್ರಾಮದಲ್ಲಿ ಮಹದೇವಮ್ಮ ಅವರ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿ ರವಿಕುಮಾರ್ ಎಂಬುವರು ದೂರು ನೀಡಿದ್ದರು ಎಂದು ತಿಳಿಸಿದರು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಮೃತರ ಮೊಮ್ಮಗಳಾದ 16 ವರ್ಷದ ಬಾಲಕಿ ತನ್ನ ಸ್ನೇಹಿತ ಆಕಾಶ್‌ನೊಂದಿಗೆ ಸೇರಿ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.