ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಅವರ ಮುಂಬೈನಲ್ಲಿರುವ ಪ್ರಸಿದ್ಧ ನಿವಾಸ ‘ಜಲ್ಸಾ’ ಇದೀಗ ಆಸ್ತಿ ವಿವಾದದ ಕಾರಣಕ್ಕೆ ಸುದ್ದಿಯಾಗಿದೆ. ಅಮಿತಾಭ್ ಬಚ್ಚನ್ ಅವರ ಸಹೋದರನ ಪತ್ನಿ ರಮೋಲಾ ಬಚ್ಚನ್ ಅವರು ಈ ಮನೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದ್ದು, 1993ರಲ್ಲಿ ನಡೆದ ಗಿಫ್ಟ್ ಡೀಡ್ (ಉಡುಗೊರೆ ಪತ್ರ) ಅನ್ನು ಪ್ರಶ್ನಿಸಿ ದೂರು ನೀಡಿದ್ದಾರೆ. ಈ ದಾಖಲೆ ಮೂಲಕ ಆಸ್ತಿಯ ಮಾಲೀಕತ್ವವನ್ನು ಜಯಾ ಬಚ್ಚನ್ ಅವರಿಗೆ ವರ್ಗಾಯಿಸಲಾಗಿತ್ತು ಎನ್ನಲಾಗಿದೆ.
ರಮೋಲಾ ಬಚ್ಚನ್ ಅವರ ಆರೋಪಗಳೇನು?
ಕಳೆದ ಏಳು ತಿಂಗಳ ಅವಧಿಯಲ್ಲಿ ರಮೋಲಾ ಅವರು ನೋಂದಣಿ ಅಧಿಕಾರಿಗಳಿಗೆ ಹಲವು ದೂರುಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. 1993ರಲ್ಲಿ ಗಿಫ್ಟ್ ಡೀಡ್ ಮಾಡಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಅದಕ್ಕೆ ತಾವು ಒಪ್ಪಿಗೆ ನೀಡಿರಲಿಲ್ಲ ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ.
ಜಲ್ಸಾ ಆಸ್ತಿ ಜಯಾ ಬಚ್ಚನ್ ಅವರ ಹೆಸರಿಗೆ ವರ್ಗಾವಣೆಯಾಗುವ ಮೊದಲು ರಮೋಲಾ ಅವರ ಹೆಸರಿನಲ್ಲಿ ದಾಖಲಾಗಿತ್ತು ಎಂದು ಹೇಳಲಾಗಿದೆ. ಸರ್ಕಾರಿ ಪ್ರಾಪರ್ಟಿ ಕಾರ್ಡ್ನಿಂದ ತಮ್ಮ ಹೆಸರನ್ನು ತೆಗೆದುಹಾಕಿ ಜಯಾ ಅವರ ಹೆಸರನ್ನು ಸೇರಿಸುವ ಪ್ರಯತ್ನ ನಡೆದಿದೆ ಎಂಬುದು ರಮೋಲಾ ಅವರ ಆರೋಪ.

ಕಪೋಲ್ ಹೌಸಿಂಗ್ ಸೊಸೈಟಿಯ ದಾಖಲೆಗಳಲ್ಲಿ ಜಯಾ ಬಚ್ಚನ್ ಅವರನ್ನು ಮಾಲೀಕರಾಗಿ ನಮೂದಿಸಲಾಗಿದೆ ಎನ್ನಲಾಗಿದೆ. ಆದರೆ ಸರ್ಕಾರಿ ಪ್ರಾಪರ್ಟಿ ಕಾರ್ಡ್ನಲ್ಲಿ ಇನ್ನೂ ರಮೋಲಾ ಅವರ ಹೆಸರಿದೆ ಎಂದು ವರದಿಯಾಗಿದೆ. ಈ ದಾಖಲೆಗಳಲ್ಲಿನ ವ್ಯತ್ಯಾಸವೇ ಆಸ್ತಿ ವರ್ಗಾವಣೆಯ ಪ್ರಕ್ರಿಯೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
1993ರ ಗಿಫ್ಟ್ ಡೀಡ್ ಬಗ್ಗೆ ಆಕ್ಷೇಪ
1993ರ ಗಿಫ್ಟ್ ಡೀಡ್ ಸರಳ ಕಾಗದದಲ್ಲಿ ಬರೆಯಲಾಗಿತ್ತು, ಆ ಸಮಯದಲ್ಲಿ ಮುದ್ರಾಂಕ ಶುಲ್ಕ ಪಾವತಿಸಿರಲಿಲ್ಲ ಹಾಗೂ ದಾಖಲೆಗೆ ಸಾಕ್ಷಿಗಳೂ ಇರಲಿಲ್ಲ ಎಂದು ರಮೋಲಾ ಆರೋಪಿಸಿದ್ದಾರೆ. ಬಳಿಕ ಈ ದಾಖಲೆಯನ್ನು ಅಭಯ್ ಯೋಜನೆಯಡಿ ನೋಂದಣಿ ಮಾಡಿ ಕ್ರಮಬದ್ಧಗೊಳಿಸಲಾಗಿದೆ ಎಂಬ ವಿಚಾರವನ್ನೂ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಸಲ್ಲಿಸಲಾದ ದೂರು ಅಂಧೇರಿಯ ಸಹಕಾರಿ ಸಂಘಗಳ ಉಪ ರಿಜಿಸ್ಟ್ರಾರ್ ಕಚೇರಿಗೆ ತಲುಪಿದೆ. ಉಪ ರಿಜಿಸ್ಟ್ರಾರ್ ಫೈಯಾಜ್ ಮುಲಾನಿ ಅವರು ವಿಚಾರಣೆ ಆರಂಭವಾಗಿದ್ದು, ಎರಡೂ ಕಡೆಯವರು ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಬಚ್ಚನ್ ಕುಟುಂಬದವರು ಈ ವಿವಾದವನ್ನು ಕುಟುಂಬದ ಆಂತರಿಕ ವಿಚಾರ ಎಂದು ಹೇಳಿರುವುದಾಗಿ ವರದಿಯಾಗಿದೆ.
ಏನಿದು ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ಮನೆ?
ಮುಂಬೈನ ಅತ್ಯಂತ ಪ್ರಸಿದ್ಧ ಸೆಲೆಬ್ರಿಟಿ ನಿವಾಸಗಳಲ್ಲಿ ಒಂದಾಗಿರುವ ‘ಜಲ್ಸಾ’ ಹಲವು ವರ್ಷಗಳಿಂದ ಬಚ್ಚನ್ ಕುಟುಂಬದೊಂದಿಗೆ ಗುರುತಿಸಿಕೊಂಡಿದೆ. ಈ ಮನೆಯನ್ನು ಹಿಂದೆ ‘ಮನ್ಸಾ’ ಎಂದು ಕರೆಯಲಾಗುತ್ತಿತ್ತು. ಖ್ಯಾತ ನಿರ್ಮಾಪಕ ಎನ್.ಸಿ. ಸಿಪ್ಪಿ ಅವರಿಗೆ ಸೇರಿದ್ದ ಈ ಮನೆಯನ್ನು 1982ರಲ್ಲಿ ಬಿಡುಗಡೆಯಾದ ‘ಸತ್ತೆ ಪೆ ಸತ್ತಾ’ ಚಿತ್ರದ ಸಂಭಾವನೆಯ ರೂಪದಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ನೀಡಲಾಗಿತ್ತು ಎನ್ನಲಾಗಿದೆ.
ನಂತರ ಅಮಿತಾಭ್ ಬಚ್ಚನ್ ಈ ಮನೆಯನ್ನು ಮಾರಾಟ ಮಾಡಿದ್ದು, ಬಳಿಕ ಮತ್ತೆ ಖರೀದಿಸಿದ್ದರು ಎಂಬ ಮಾಹಿತಿ ವರದಿಗಳಲ್ಲಿದೆ. ಇದೀಗ 1993ರ ಗಿಫ್ಟ್ ಡೀಡ್ ಮತ್ತು ಆಸ್ತಿ ದಾಖಲೆಗಳ ಆಧಾರದ ಮೇಲೆ ಮಾಲೀಕತ್ವದ ಬಗ್ಗೆ ವಿವಾದ ಉಂಟಾಗಿದೆ. ಈ ಕುರಿತು ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ.