ಅಕ್ಷರ ಗಾತ್ರ

ಒಂದು ವರ್ಷದ ಮಗುವಿನ ಚಿಕಿತ್ಸೆಗೆ ಕುಮಾರಸ್ವಾಮಿ ಸಾಥ್; ಖರ್ಚಿನ ಜವಾಬ್ದಾರಿ ನನ್ನದೇ ಎಂದ ಹೆಚ್‌ಡಿಕೆ

ಆಸ್ಪತ್ರೆಯಲ್ಲಿ ಕಣ್ಣೀರು ಹಾಕುತ್ತಿರುವ ಮಗುವಿನ ತಾಯಿಗೆ ಕೇಂದ್ರ ಸಚಿವ ಹೆಚ್‌ಡಿಕೆ ಸಾಂತ್ವನ ಹೇಳುತ್ತಿರುವುದು

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಂದು ವರ್ಷದ ಮಗುವಿನ ಆರೋಗ್ಯ ಸ್ಥಿತಿ ಕಂಡು ತೀವ್ರ ನೋವಾಗಿದೆ. ಮಗು ಸಂಪೂರ್ಣ ಗುಣಮುಖವಾಗಿ ಮೊದಲಿನಂತೆ ಆಟವಾಡುವಂತಾಗಬೇಕು. ಚಿಕಿತ್ಸೆಗೆ ಎಷ್ಟೇ ಖರ್ಚಾದರೂ ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಯಲ್ಲಿ ಲೋಪವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಪೋಷಕರಿಗೆ ಧೈರ್ಯ ತುಂಬಿದರು. ಬಳಿಕ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಗುವಿನ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ಸಮಾಲೋಚನೆ ನಡೆಸಿದರು.

ಕಳೆದ ಮೂರು-ನಾಲ್ಕು ದಿನಗಳಿಂದ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಹಿಂದೆ ಮಾಧ್ಯಮಗಳ ಮೂಲಕ ಆಸ್ಪತ್ರೆಯ ಗಮನ ಸೆಳೆದಿದ್ದ ಕುಮಾರಸ್ವಾಮಿ, ಇದೀಗ ಸ್ವತಃ ಆಸ್ಪತ್ರೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ.

ಆಸ್ಪತ್ರೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗುವಿನ ಪೋಷಕರ ದುಃಖ ಮತ್ತು ಆಕ್ರೋಶವನ್ನು ಕಂಡಾಗ ಕಣ್ಣೀರು ಬರುತ್ತದೆ. ವೈದ್ಯರ ನಿರ್ಲಕ್ಷ್ಯವೋ ಅಥವಾ ಔಷಧಿಯ ವ್ಯತ್ಯಾಸವೋ ಎಂಬುದು ಈಗ ಮುಖ್ಯವಲ್ಲ. ಈ ಹಂತದಲ್ಲಿ ಯಾರನ್ನೂ ದೂಷಿಸುವುದಕ್ಕಿಂತ ಮಗುವಿನ ಆರೋಗ್ಯ ಸುಧಾರಿಸುವುದು ಮುಖ್ಯ ಎಂದರು.

ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಹೊರಗಿನ ವೈದ್ಯರೊಂದಿಗೂ ಚರ್ಚಿಸಿ ಖಚಿತಪಡಿಸಿಕೊಂಡಿದ್ದೇನೆ. ಅಗತ್ಯವಿದ್ದರೆ ಹೊರಗಿನಿಂದಲೂ ಉನ್ನತ ಮಟ್ಟದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಅಲ್ಲದೆ, ಮಗುವಿಗೆ ಪ್ರತ್ಯೇಕ ವಿಶೇಷ ಕೊಠಡಿ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಆರಂಭದಲ್ಲೇ ವೈದ್ಯರು ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಪೋಷಕರಿಗೆ ಸರಿಯಾದ ಮಾಹಿತಿ ನೀಡಿ ಧೈರ್ಯ ತುಂಬಿದ್ದರೆ ಇಂತಹ ಗೊಂದಲ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗುತ್ತಿರಲಿಲ್ಲ. ಈಗ ಸಂಘರ್ಷಕ್ಕೆ ಇಳಿಯುವುದಕ್ಕಿಂತ ಮಗುವನ್ನು ಗುಣಪಡಿಸುವುದೇ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಇನ್ನು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಮಗು ಶೀಘ್ರ ಗುಣಮುಖವಾಗುವಂತೆ ಉತ್ತಮ ಚಿಕಿತ್ಸೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.