ಅಕ್ಷರ ಗಾತ್ರ

KSRTC ಬಸ್ ಬಾಡಿಗೆ ದರ ಏರಿಕೆ: ಪ್ರವಾಸ, ಮದುವೆ ಸಮಾರಂಭಗಳಿಗೆ ಬಸ್ ಬುಕ್ ಮಾಡುವವರಿಗೆ ಹೆಚ್ಚುವರಿ ಹೊರೆ!

ದೀಪಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಲು ನಿಲ್ದಾಣದಲ್ಲಿ ಸಾಲಾಗಿ ನಿಂತಿರುವ KSRTC ಬಸ್‌ಗಳು.

ಬೆಂಗಳೂರು: ಇತ್ತೀಚೆಗಷ್ಟೇ ಬಸ್ ಟಿಕೆಟ್ ದರಗಳನ್ನು ಹೆಚ್ಚಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಇದೀಗ ಬಸ್ ಬಾಡಿಗೆ ದರಗಳನ್ನೂ ಪರಿಷ್ಕರಿಸಿದೆ. ಪ್ರವಾಸ, ಮದುವೆ ಸಮಾರಂಭ ಹಾಗೂ ಇತರೆ ಕಾರ್ಯಕ್ರಮಗಳಿಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಾಡಿಗೆಗೆ ಪಡೆಯುವವರಿಗೆ ಪರಿಷ್ಕೃತ ದರ ಅನ್ವಯವಾಗಲಿದೆ.

ರಾಜ್ಯದೊಳಗಿನ ಸಂಚಾರ ಮತ್ತು ಅಂತರರಾಜ್ಯ ಸಂಚಾರಕ್ಕೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದೆ. ಬಸ್‌ಗಳ ಮಾದರಿಗೆ ಅನುಗುಣವಾಗಿ ಪ್ರತಿ ಕಿಲೋಮೀಟರ್‌ಗೆ ಬಾಡಿಗೆ ದರ ನಿಗದಿಯಾಗಿದ್ದು, ವಾರಾಂತ್ಯದಲ್ಲಿ ಬಸ್ ಬಾಡಿಗೆ ದರ ಹೆಚ್ಚಿರಲಿದೆ.

ಕೆಎಸ್‌ಆರ್‌ಟಿಸಿ ನಿಗದಿಪಡಿಸಿರುವ ಹೊಸ ದರಗಳ ಪ್ರಕಾರ, ಸಾಮಾನ್ಯ ಬಸ್‌ಗೆ ರಾಜ್ಯದೊಳಗೆ ಪ್ರತಿ ಕಿಲೋಮೀಟರ್‌ಗೆ 62 ರೂ. ಹಾಗೂ ಅಂತರರಾಜ್ಯ ಸಂಚಾರಕ್ಕೆ 66 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಅಶ್ವಮೇಧ ಬಸ್‌ಗೆ ಕ್ರಮವಾಗಿ 67 ರೂ. ಮತ್ತು 70 ರೂ. ದರವಿದೆ. ರಾಜಹಂಸ ಬಸ್‌ಗೆ ರಾಜ್ಯದೊಳಗೆ 68 ರೂ. ಹಾಗೂ ಅಂತರರಾಜ್ಯಕ್ಕೆ 72 ರೂ. ನಿಗದಿಯಾಗಿದೆ.

ಇನ್ನು ನಾನ್‌-ಎಸಿ ಸ್ಲೀಪರ್ ಬಸ್‌ಗೆ ರಾಜ್ಯದೊಳಗೆ 80 ರೂ. ಹಾಗೂ ಅಂತರರಾಜ್ಯಕ್ಕೆ 85 ರೂ. ಬಾಡಿಗೆ ಇದೆ. ಪಲ್ಲಕ್ಕಿ ಮತ್ತು ಐರಾವತ ಬಸ್‌ಗಳಿಗೆ ರಾಜ್ಯದೊಳಗೆ 85 ರೂ. ಹಾಗೂ ಅಂತರರಾಜ್ಯ ಸಂಚಾರಕ್ಕೆ 90 ರೂ. ದರ ನಿಗದಿಪಡಿಸಲಾಗಿದೆ.

ಅಂಬಾರಿ ಉತ್ಸವ ಸ್ಲೀಪರ್ ಬಸ್‌ಗೆ ರಾಜ್ಯದೊಳಗೆ ಹಾಗೂ ಅಂತರರಾಜ್ಯ ಸಂಚಾರಕ್ಕೆ ಪ್ರತಿ ಕಿಲೋಮೀಟರ್‌ಗೆ 160 ರೂ. ಬಾಡಿಗೆ ನಿಗದಿಯಾಗಿದೆ. ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗೆ ರಾಜ್ಯದೊಳಗೆ 125 ರೂ. ಹಾಗೂ ಅಂತರರಾಜ್ಯ ಸಂಚಾರಕ್ಕೆ 130 ರೂ. ದರವಿದೆ.

ಹೊಸ ದರ ಪರಿಷ್ಕರಣೆಯಿಂದ ಖಾಸಗಿ ಕಾರ್ಯಕ್ರಮಗಳು, ಪ್ರವಾಸ ಹಾಗೂ ಮದುವೆ ಸಮಾರಂಭಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಾಡಿಗೆಗೆ ಪಡೆಯುವವರ ಖರ್ಚು ಹೆಚ್ಚಾಗಲಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.