ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುಚ್ಛಕ್ತಿ ಲೋಕಪಾಲರ (Electricity Ombudsman) ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹80,000 ಕ್ರೋಡೀಕೃತ ಸಂಭಾವನೆ ನೀಡಲಾಗುತ್ತದೆ. ಆಸಕ್ತರು ನವೆಂಬರ್ 12, 2026ರೊಳಗೆ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ ಮತ್ತು ಅನುಭವ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವಿದ್ಯುತ್ ಸರಬರಾಜು ಮತ್ತು ವಿತರಣೆ, ಹಣಕಾಸು, ಕಾನೂನು ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷಗಳ ಅನುಭವ ಹೊಂದಿರಬೇಕು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಹಾಗೂ ಕನ್ನಡ ಭಾಷೆಯಲ್ಲಿ ಕಾರ್ಯನಿರ್ವಹಿಸುವ ಜ್ಞಾನವೂ ಅಗತ್ಯವಾಗಿದೆ.
ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 65 ವರ್ಷ ಮೀರಿರಬಾರದು. ಕಾನೂನು ಕ್ಷೇತ್ರದ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟು?
- ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು: ₹1,000
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು: ₹100
ಅರ್ಜಿ ಶುಲ್ಕವನ್ನು “ಕಾರ್ಯದರ್ಶಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಬೆಂಗಳೂರು” ಹೆಸರಿಗೆ ಡಿಮ್ಯಾಂಡ್ ಡ್ರಾಫ್ಟ್ (DD) ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ನಮೂನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಚೇರಿಯಿಂದ ಅಥವಾ ಅಧಿಕೃತ ವೆಬ್‌ಸೈಟ್ kerc.karnataka.gov.in ಮೂಲಕ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಡಿಮ್ಯಾಂಡ್ ಡ್ರಾಫ್ಟ್ ಹಾಗೂ ಅಗತ್ಯ ಅರ್ಹತಾ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ, ಕಾರ್ಯದರ್ಶಿಯವರ ಕಚೇರಿಗೆ ತಲುಪುವಂತೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 12, 2026.
ಈ ಹುದ್ದೆಯು ಆರಂಭದಲ್ಲಿ ಒಂದು ವರ್ಷದ ಗುತ್ತಿಗೆ ಅವಧಿಗೆ ಇರಲಿದ್ದು, ಆಯೋಗದ ವಿವೇಚನೆಯಂತೆ ಸೇವಾವಧಿಯನ್ನು ವಿಸ್ತರಿಸುವ ಅವಕಾಶವಿದೆ.