ಬೆಂಗಳೂರು: ಪೆಟ್ರೋಲ್‌ನಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಪೆಟ್ರೋಲ್‌ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣವಾಗಿದೆ ಎಂಬುದನ್ನು ಪರಿಶೀಲಿಸಲು ನಮ್ಮ ಬಳಿ ಉತ್ತಮ ಗುಣಮಟ್ಟದ ಉಪಕರಣಗಳಿವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಆರ್. ಅಶೋಕ್, ಪೆಟ್ರೋಲ್ ಬಂಕ್‌ನವರೇ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿದರೆ ಅದನ್ನು ಪತ್ತೆಹಚ್ಚುವುದು ಹೇಗೆ? ಎಥೆನಾಲ್ ಪ್ರಮಾಣವನ್ನು ಪರಿಶೀಲಿಸಲು ಅಗತ್ಯವಾದ ಉಪಕರಣಗಳು ನಮ್ಮಲ್ಲಿವೆಯೇ? ಹಬ್ಬದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರದ ಬಳಿ ಈ ಕುರಿತು ಅಂಕಿ-ಅಂಶಗಳಿದ್ದರೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಪೆಟ್ರೋಲ್‌ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ದೇಶದ ಆರ್ಥಿಕ ಉಳಿತಾಯದ ಉದ್ದೇಶದಿಂದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು.

ಇದೇ ವೇಳೆ ರಾಜ್ಯದ ಇತರ ಸಮಸ್ಯೆಗಳತ್ತ ಗಮನ ಸೆಳೆದ ಆರ್. ಅಶೋಕ್, ತಮಿಳುನಾಡಿನಿಂದ ಚಿಕ್ಕಪೇಟೆಗೆ ಹಾಲು ಬರುತ್ತಿದೆ. ಅಕ್ಕಿಯಲ್ಲಿ ಕಲ್ಲು ಬೆರೆಸಲಾಗುತ್ತಿದೆ. ಅಕ್ರಮವಾಗಿ ಡ್ರಗ್ಸ್ ತಯಾರಿಸುವ ಕಾರ್ಖಾನೆಗಳೂ ಇವೆ. ಇವುಗಳ ಬಗ್ಗೆ ಮೊದಲು ಪರಿಶೀಲನೆ ನಡೆಸಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾವೇರಿ ನದಿ ನೀರು ಮಲಿನಗೊಂಡಿರುವ ಕುರಿತು ತಮಿಳುನಾಡು ವರದಿ ಬಿಡುಗಡೆ ಮಾಡಿದೆ. ಮೊದಲು ರಾಜ್ಯದ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಗೃಹಲಕ್ಷ್ಮಿ ಬಾಕಿ ಹಣ ಪಾವತಿಸಲೇಬೇಕು:
ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ಕುರಿತು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ವಿಚಾರಕ್ಕೂ ಆರ್. ಅಶೋಕ್ ಪ್ರತಿಕ್ರಿಯಿಸಿದರು. ಚುನಾವಣೆಗೂ ಮುನ್ನ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಬೇರೆ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಉಳಿದಿರುವ 5 ಸಾವಿರ ರೂಪಾಯಿಗಳನ್ನು ಸರ್ಕಾರ ಕಡ್ಡಾಯವಾಗಿ ಪಾವತಿಸಬೇಕು. ಈ ವಿಚಾರವನ್ನು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಮುಂದಿನ ಒಂದು ವರ್ಷವೂ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಖಾತರಿ ಇಲ್ಲ. ಮುಖ್ಯಮಂತ್ರಿ ಅವರೇ ಸರ್ಕಾರಕ್ಕೆ ಹಳ್ಳ ತೋಡುತ್ತಿದ್ದಾರೆ ಎಂದು ಟೀಕಿಸಿದರು.