ಕಾನ್ಪುರ: ಮನೆಯ ಮೇಲ್ಛಾವಣಿ ಕುಸಿದು 20 ದಿನದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ನಡೆದಿದೆ.
ಅವಶೇಷಗಳಡಿ ಸಿಲುಕಿದ್ದ ಮಗುವನ್ನು ರಕ್ಷಿಸಲು ತಾಯಿ ತನ್ನ ದೇಹವನ್ನೇ ಕವಚದಂತೆ ಅಡ್ಡವಿಟ್ಟಿರುವುದು ಘಟನೆಯ ತೀವ್ರತೆಯನ್ನು ಮತ್ತಷ್ಟು ಮನಕಲಕುವಂತೆ ಮಾಡಿದೆ. ಬೆಳಿಗ್ಗೆ 8.30ರಿಂದ 9 ಗಂಟೆಯ ನಡುವೆ ಈ ಅವಘಡ ಸಂಭವಿಸಿದೆ. ಮೃತರನ್ನು 60 ವರ್ಷದ ವಿನೋದಿನಿ ಶುಕ್ಲಾ, 28 ವರ್ಷದ ಅವರ ಸೊಸೆ ಅನ್ಶಿಕಾ ಶುಕ್ಲಾ ಹಾಗೂ ಅನ್ಶಿಕಾ ಅವರ 20 ದಿನದ ಮಗು ಆರವ್ ಎಂದು ಗುರುತಿಸಲಾಗಿದೆ. ಅನ್ಶಿಕಾ ಅವರ ಪತಿ 32 ವರ್ಷದ ಹರ್ಷ್ ಶುಕ್ಲಾ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಗುವನ್ನು ರಕ್ಷಿಸಲು ತಾಯಿಯ ಕೊನೆಯ ಪ್ರಯತ್ನ:
ಕುಟುಂಬದ ನಾಲ್ವರು ಮನೆಯ ಒಂದು ಕೋಣೆಯಲ್ಲಿದ್ದಾಗ ಏಕಾಏಕಿ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. ಆ ಸಮಯದಲ್ಲಿ ಅನ್ಶಿಕಾ ಮಗುವಿಗೆ ಹಾಲುಣಿಸುತ್ತಿದ್ದರು. ಹರ್ಷ್ ಮತ್ತು ಅವರ ತಾಯಿ ವಿನೋದಿನಿ ಪರಸ್ಪರ ಮಾತನಾಡುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮೇಲ್ಛಾವಣಿ ಕುಸಿದ ಪರಿಣಾಮ ನಾಲ್ವರೂ ಅವಶೇಷಗಳಡಿ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಅನ್ಶಿಕಾ ತಮ್ಮ ಮಗುವನ್ನು ರಕ್ಷಿಸಲು ದೇಹವನ್ನೇ ಕವಚದಂತೆ ಅಡ್ಡವಿಟ್ಟಿರುವುದು ಬೆಳಕಿಗೆ ಬಂದಿದೆ. ಈ ದೃಶ್ಯ ಸ್ಥಳೀಯರು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದವರನ್ನು ದುಃಖಕ್ಕೀಡು ಮಾಡಿದೆ.
ಮೇಲ್ಛಾವಣಿ ಕುಸಿದ ಭಾರೀ ಶಬ್ದಕ್ಕೆ ಸ್ಥಳೀಯರು ದೌಡು:
ಅವಘಡದ ಶಬ್ದ ಕೇಳುತ್ತಿದ್ದಂತೆ ಕುಟುಂಬದ ಇತರ ಸದಸ್ಯರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಅವಶೇಷಗಳನ್ನು ತೆರವುಗೊಳಿಸಿ ನಾಲ್ವರನ್ನು ಹೊರತೆಗೆದು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ, ವಿನೋದಿನಿ, ಅನ್ಶಿಕಾ ಹಾಗೂ ಹಸುಗೂಸು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಸುಮಾರು 35 ವರ್ಷ ಹಳೆಯದಾದ ಒಂದೇ ಅಂತಸ್ತಿನ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೇಲ್ಛಾವಣಿಯ ಆಧಾರ ಕಂಬದ ಒಂದು ಭಾಗ ವಿನೋದಿನಿ ಅವರ ಮೇಲೆ ಬಿದ್ದಿದ್ದರೆ, ಅನ್ಶಿಕಾ ಮತ್ತು ಮಗು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಹರ್ಷ್ ಅವರಿಗೂ ಗಾಯಗಳಾಗಿವೆ.
ನೀರಿನ ಸೋರಿಕೆಯಿಂದ ಮೇಲ್ಛಾವಣಿ ದುರ್ಬಲವಾಗಿತ್ತೇ?
ಘಟನೆ ಕುರಿತು ಮಾಹಿತಿ ನೀಡಿರುವ ಡಿಸಿಪಿ ಎಸ್.ಎಂ. ಖಾಸಿಂ ಅಬಿದಿ, ಪ್ರಾಥಮಿಕ ತನಿಖೆಯ ಪ್ರಕಾರ ಮನೆಯ ಮೇಲ್ಛಾವಣಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ಮೇಲ್ಛಾವಣಿಯ ಬಲ ಕುಂದಿರಬಹುದು. ಅಲ್ಲದೆ, ಸಂಗ್ರಹವಾಗಿದ್ದ ನೀರಿನ ಭಾರವೂ ಕುಸಿತಕ್ಕೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು, ಅಗತ್ಯ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಆರಂಭದಲ್ಲಿ ಕುಟುಂಬಸ್ಥರು ಮೃತದೇಹಗಳನ್ನು ಮನೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿದ್ದರು. ಬಳಿಕ ಪೊಲೀಸರು ಮನವೊಲಿಸಿದ ನಂತರ ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ.