ಅಕ್ಷರ ಗಾತ್ರ

ಪತ್ನಿ ಮೇಲಿನ ಸಿಟ್ಟಿಗೆ ಘೋರ ಕೃತ್ಯ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯ ಹ*ತ್ಯೆ!

ಬೆಂಗಳೂರಿನಲ್ಲಿ ಕುಟುಂಬದ ಸದಸ್ಯರ ಹತ್ಯೆ ಆರೋಪದಡಿ ಬಂಧಿತನಾಗಿರುವ ಶೇಖರ್ ಮತ್ತು ಆತನ ಪತ್ನಿ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಸಾಮೂಹಿಕ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯ ಮೇಲಿನ ಕೋಪಕ್ಕೆ ಏಳು ಮಂದಿ ಕುಟುಂಬಸ್ಥರನ್ನು ಕೊಲೆ ಮಾಡಿರುವ ಆರೋಪ ವ್ಯಕ್ತಿಯೊಬ್ಬನ ವಿರುದ್ಧ ಕೇಳಿಬಂದಿದೆ. ಪತ್ನಿ, ಏಳು ವರ್ಷದ ಮಗ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಶ್ರೀರಾಂಪುರ ನಿವಾಸಿ ಶೇಖರ್ ಬಂಧಿತ ಆರೋಪಿ. ಈತ ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪತ್ನಿಯೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಕೋಪಗೊಂಡು ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಪತ್ನಿ ತನ್ನೊಂದಿಗೆ ಜಗಳವಾಡುತ್ತಿದ್ದಳು ಹಾಗೂ ಬೈಯುತ್ತಿದ್ದಳು ಎಂಬ ಕಾರಣಕ್ಕೆ ಆರೋಪಿ ಶೇಖರ್ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಪತ್ನಿ, ಅತ್ತೆ, ಪತ್ನಿಯ ಇಬ್ಬರು ಸಹೋದರರು, ಇಬ್ಬರು ಅತ್ತಿಗೆಯರು ಹಾಗೂ ಏಳು ವರ್ಷದ ಮಗನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ರುಬ್ಬುವ ಕಲ್ಲನ್ನು ಬಳಸಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೃತ್ಯದ ಬಳಿಕ ರುಬ್ಬುವ ಕಲ್ಲನ್ನು ತೊಳೆದು ಇಟ್ಟಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಹತ್ಯೆ ನಡೆದ ಸ್ಥಳ, ಕೃತ್ಯಕ್ಕೆ ಬಳಸಲಾದ ವಸ್ತುಗಳು ಹಾಗೂ ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನು ಹತ್ಯೆಯ ಬಳಿಕ ಮೃತದೇಹಗಳನ್ನು ತನ್ನ ಕ್ಯಾಬ್‌ನಲ್ಲಿ ಸಾಗಿಸಿ ನಂದಿಬೆಟ್ಟ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಿತ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಕುಟುಂಬಸ್ಥರು ನಾಪತ್ತೆಯಾಗಿರುವುದಾಗಿ ಆರೋಪಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದ ಎನ್ನಲಾಗಿದೆ. ಸುಮಾರು 15 ದಿನಗಳ ಹಿಂದೆ ತನ್ನ ಪತ್ನಿ ಹಾಗೂ ಮನೆಯವರು ಕಾಣೆಯಾಗಿದ್ದಾರೆ ಎಂದು ಶೇಖರ್ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಉತ್ತರ ವಿಭಾಗದ ಡಿಸಿಪಿ ನ್ಯಾಮೇಗೌಡ, ಕುಟುಂಬಸ್ಥರು ನಾಪತ್ತೆಯಾಗಿರುವುದಾಗಿ ಆರೋಪಿಯೇ ದೂರು ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದ್ದು, ರಾಜಾಜಿನಗರ ಹಾಗೂ ಶ್ರೀರಾಂಪುರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಹತ್ಯೆಗೆ ನಿಖರ ಕಾರಣವೇನು? ಕೃತ್ಯ ಹೇಗೆ ನಡೆಯಿತು? ಮೃತದೇಹಗಳನ್ನು ಎಲ್ಲೆಲ್ಲಿ ಸಾಗಿಸಲಾಗಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಮೃತದೇಹಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮೃತದೇಹಗಳ ಪತ್ತೆ ಹಾಗೂ ತನಿಖೆಯಿಂದ ಲಭ್ಯವಾಗುವ ಸಾಕ್ಷ್ಯಗಳ ಆಧಾರದಲ್ಲಿ ಪ್ರಕರಣದ ಸಂಪೂರ್ಣ ವಿವರಗಳು ಸ್ಪಷ್ಟವಾಗಬೇಕಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.