ನರಗುಂದ: ಕಡಲೆ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಸ್ನೇಹಿತನಿಗೇ ವಂಚಿಸಿ, ತದನಂತರ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ: ಸುರಕೋಡ ಗ್ರಾಮದ ದ್ಯಾಮಪ್ಪ ಗೊಜನೂರು (62) ಕೊಲೆಯಾದ ದುರ್ದೈವಿ. ಈತನ ಸ್ನೇಹಿತ ಶರಣಪ್ಪ ನರಗುಂದ ಎಂಬಾತನೇ ಕೊಲೆ ಮಾಡಿದ ಆರೋಪಿ.
ದ್ಯಾಮಪ್ಪ ಹಾಗೂ ಶರಣಪ್ಪ ಆತ್ಮೀಯ ಸ್ನೇಹಿತರಾಗಿದ್ದರು. ದ್ಯಾಮಪ್ಪ ತನ್ನ ಬಳಿಯಿದ್ದ 45 ಕ್ವಿಂಟಾಲ್ ಕಡಲೆಯನ್ನು ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗಲಿ ಎಂಬ ಉದ್ದೇಶದಿಂದ ಸ್ನೇಹಿತ ಶರಣಪ್ಪನ ಹೆಸರಿನಲ್ಲಿ ಗೋಡೌನ್ನಲ್ಲಿ ಸ್ಟಾಕ್ ಇರಿಸಿದ್ದನು. ಆದರೆ, ಕಡಲೆಯ ಮಾಲೀಕ ದ್ಯಾಮಪ್ಪನಿಗೆ ತಿಳಿಯದಂತೆ ಶರಣಪ್ಪ ಆ ಕಡಲೆಯನ್ನು ಮಾರಾಟ ಮಾಡಿ ಬಂದ ₹2,80,000 ಹಣವನ್ನು ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದನು.
ಕೊಡಲಿಯಿಂದ ಕೊಚ್ಚಿ ಕೊಲೆ, ಶವ ಮುಚ್ಚಿಟ್ಟ ಆರೋಪಿ: ಇನ್ನೊಂದು ವಾರದಲ್ಲಿ ಕಡಲೆ ಮಾರಾಟ ಮಾಡೋಣ ಎಂದು ದ್ಯಾಮಪ್ಪ ನಿರ್ಧರಿಸಿದ್ದಾಗ, ತಾನು ಕಡಲೆ ಮಾರಾಟ ಮಾಡಿದ ಕಳ್ಳಾಟ ಬಯಲಾಗುತ್ತದೆ ಎಂಬ ಭೀತಿಯಿಂದ ಶರಣಪ್ಪ ಸ್ನೇಹಿತ ದ್ಯಾಮಪ್ಪನನ್ನು ಬೈಕ್ನಲ್ಲಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ.

ಅಕ್ಟೋಬರ್ 8ರಂದು ಭೈರನಹಟ್ಟಿ ಗ್ರಾಮದ ಬಳಿ ಕೊಡಲಿಯಿಂದ ದ್ಯಾಮಪ್ಪನ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಅಂದು ರಾತ್ರಿ ಸೋಮಾಪುರದ ಉಪ ಕಾಲುವೆ ಪೈಪ್ ಬಳಿ ಶವವನ್ನು ತೆಗೆದುಕೊಂಡು ಹೋಗಿ ಮುಚ್ಚಿಟ್ಟಿದ್ದಾನೆ.
ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲು: ಅಕ್ಟೋಬರ್ 8ರಂದು ಮನೆ ತೊರೆದಿದ್ದ ದ್ಯಾಮಪ್ಪ ಎರಡು ದಿನಗಳಾದರೂ ವಾಪಸ್ ಬರದಿದ್ದಾಗ, ಕುಟುಂಬಸ್ಥರು ಅಕ್ಟೋಬರ್ 10ರಂದು ನರಗುಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು,
ಕೊನೆಯ ಬಾರಿಗೆ ದ್ಯಾಮಪ್ಪ ಶರಣಪ್ಪನ ಜೊತೆ ಬೈಕ್ನಲ್ಲಿ ತೆರಳಿದ್ದ ಸುಳಿವು ಆಧರಿಸಿ ಶರಣಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಕರಾಳ ಸತ್ಯ ಬಯಲಾಗಿದೆ. ಪ್ರಸ್ತುತ ಆರೋಪಿ ಶರಣಪ್ಪನನ್ನು ಬಂಧಿಸಿರುವ ಪೊಲೀಸರು, ಆತನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.