ಅಕ್ಷರ ಗಾತ್ರ

ಅಭಿಜೀತ್ ದಿಪ್ಕೆ ಪಕ್ಷಕ್ಕೆ ವಿದೇಶಿ ಫಂಡಿಂಗ್: ದೇಶಭಕ್ತರೇ ಜಾಗೃತರಾಗಿ – ಭಾರತೀಯರಿಗೆ ಹಾಲಿವುಡ್ ಗಾಯಕಿ ಕರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಅಭಿಜೀತ್ ದಿಪ್ಕೆ ಮತ್ತು ಗಾಯಕಿ Mary Millben

ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಅದರ ಮುಖಂಡ ಅಭಿಜೀತ್ ದಿಪ್ಕೆ ಅವರಿಗೆ ಅಮೆರಿಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರೋಧಿ ದಾನಿಗಳಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಆರೋಪಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಭಾರತದ ಯುವಕರು ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮಾರ್ಗದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಕರೆ ನೀಡಿದ್ದಾರೆ.

ಮೇರಿ ಮಿಲ್ಬೆನ್ ತಮ್ಮ ಪೋಸ್ಟ್‌ನಲ್ಲಿ, ಅಮೆರಿಕದಲ್ಲಿರುವ ಕೆಲವು ದಾನಿಗಳು ಸಿಜೆಪಿ ಹಾಗೂ ಅದರ ಮುಖಂಡ ಅಭಿಜೀತ್ ದಿಪ್ಕೆ ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಈ ದಾನಿಗಳು ಪ್ರಧಾನಿ ಮೋದಿ ಅವರ ರಾಜಕೀಯ ನಿಲುವುಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಅಲ್ಲದೆ, ವಿವಿಧ ದೇಶಗಳ ರಾಜಕೀಯ ಬೆಳವಣಿಗೆಗಳ ಮೇಲೆ ಪ್ರಭಾವ ಬೀರಲು ವಿದೇಶಿ ದಾನಿಗಳು ಹಣಕಾಸಿನ ನೆರವು ನೀಡುವ ಮಾದರಿಯಿದೆ ಎಂದು ಮಿಲ್ಬೆನ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪಡೆದ ವ್ಯಕ್ತಿಗಳನ್ನು ಗುರುತಿಸಿ, ಅವರ ಮೂಲಕ ಆಯಾ ದೇಶಗಳ ರಾಜಕೀಯ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತದೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತದ ಯುವಕರು ಮೌನವಾಗಿರದೆ ತಮ್ಮ ನಿಲುವನ್ನು ಶಾಂತಿಯುತವಾಗಿ ವ್ಯಕ್ತಪಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಮೇರಿ ಮಿಲ್ಬೆನ್ ಅವರು ಅಮೆರಿಕದ ಗಾಯಕಿ ಹಾಗೂ ನಟಿಯಾಗಿದ್ದು, ಭಾರತದ ರಾಷ್ಟ್ರಗೀತೆ ಮತ್ತು ‘ಓಂ ಜೈ ಜಗದೀಶ ಹರೇ’ ಭಕ್ತಿಗೀತೆಯನ್ನು ಹಾಡುವ ಮೂಲಕ ಭಾರತೀಯರ ಗಮನ ಸೆಳೆದಿದ್ದಾರೆ.

ಆದರೆ, ಸಿಜೆಪಿಗೆ ಅಮೆರಿಕದಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂಬ ಆರೋಪಕ್ಕೆ ಸಾರ್ವಜನಿಕವಾಗಿ ದೃಢಪಟ್ಟ ಸಾಕ್ಷ್ಯಗಳು ಲಭ್ಯವಾಗಿಲ್ಲ. ಮತ್ತೊಂದೆಡೆ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ವಿದೇಶಿ ಹಣಕಾಸಿನ ನೆರವು ಪಡೆದಿರುವ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ಹಾಗೂ ಸ್ನೇಹಿತರ ನೆರವಿನಿಂದ ಸಂಘಟನೆಯ ಚಟುವಟಿಕೆಗಳಿಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ಅವರು ಈ ಹಿಂದೆ ತಿಳಿಸಿದ್ದರು.

 

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.