ತಮ್ಮ ವಿಭಿನ್ನ ಅಭಿನಯ ಮತ್ತು ವಿಶಿಷ್ಟ ಪಾತ್ರಗಳ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ನಟ ಫಹಾದ್ ಫಾಸಿಲ್ ಅವರಿಗೆ ಇದೀಗ ನಿರಾಸೆಯ ಸುದ್ದಿಯೊಂದು ಎದುರಾಗಿದೆ. ಬಾಲಿವುಡ್ನ ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ ಅವರೊಂದಿಗೆ ಫಹಾದ್ ನಟಿಸಬೇಕಿದ್ದ ‘ದಿ ಇಡಿಯಟ್ ಆಫ್ ಇಸ್ತಾನ್ಬುಲ್’ ಸಿನಿಮಾ ಅಧಿಕೃತವಾಗಿ ಕೈಬಿಡಲಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಫಹಾದ್ ಫಾಸಿಲ್, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಗಮನ ಸೆಳೆದಿದ್ದಾರೆ. ಅವರ ಅಭಿನಯಕ್ಕೆ ಮನಸೋತಿದ್ದ ನಿರ್ದೇಶಕ ಇಮ್ತಿಯಾಜ್ ಅಲಿ, ತಮ್ಮ ಮುಂದಿನ ಸಿನಿಮಾದಲ್ಲಿ ಫಹಾದ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದರು. ಆದರೆ ಇದೀಗ ಆ ಯೋಜನೆ ನಿಂತುಹೋಗಿದೆ.
ಫಹಾದ್ ಫಾಸಿಲ್ ಸಿನಿಮಾಗೆ ಬ್ರೇಕ್ ಬಿದ್ದಿದ್ದೇಕೆ?
ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಫಹಾದ್ ಫಾಸಿಲ್ ನಟಿಸಬೇಕಿದ್ದ ಸಿನಿಮಾಕ್ಕೆ ‘ದಿ ಇಡಿಯಟ್ ಆಫ್ ಇಸ್ತಾನ್ಬುಲ್’ ಎಂಬ ಶೀರ್ಷಿಕೆ ನಿಗದಿಪಡಿಸಲಾಗಿತ್ತು. ಈ ವಿಭಿನ್ನ ಕಾಂಬಿನೇಷನ್ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿತ್ತು.

ಆದರೆ ಹಲವು ಪ್ರಯತ್ನಗಳ ನಡುವೆಯೂ ಚಿತ್ರವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಹೀಗಾಗಿ ಸದ್ಯಕ್ಕೆ ಸಿನಿಮಾ ಕೈಬಿಡಲಾಗಿದೆ ಎಂದು ನಿರ್ದೇಶಕ ಇಮ್ತಿಯಾಜ್ ಅಲಿ ಸ್ಪಷ್ಟಪಡಿಸಿದ್ದಾರೆ.
ಫಹಾದ್ ಜೊತೆ ಕೆಲಸ ಮಾಡಲು ಈಗಲೂ ಆಸಕ್ತಿ ಇದೆ ಎಂದ ನಿರ್ದೇಶಕ!
ಮುಂಬೈನಲ್ಲಿ ನಡೆದ ಜಾಗರಣ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಇಮ್ತಿಯಾಜ್ ಅಲಿ, ಫಹಾದ್ ಫಾಸಿಲ್ ಜೊತೆಗಿನ ಸಿನಿಮಾ ಕುರಿತು ಮಾತನಾಡಿದ್ದಾರೆ.
‘ಫಹಾದ್ ಫಾಸಿಲ್ ಅವರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಆಸಕ್ತಿ ಇದೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡಲು ಪ್ರಯತ್ನಿಸಿದ್ದೆವು. ಆದರೆ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ಈಗಲೂ ನಾವಿಬ್ಬರೂ ಸಂಪರ್ಕದಲ್ಲಿದ್ದೇವೆ. ಒಟ್ಟಿಗೆ ಕೆಲಸ ಮಾಡುವ ಉತ್ಸಾಹ ನಮ್ಮಿಬ್ಬರಲ್ಲೂ ಇದೆ’ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಭವಿಷ್ಯದಲ್ಲಿ ಫಹಾದ್ ಫಾಸಿಲ್ ಅವರೊಂದಿಗೆ ಸಿನಿಮಾ ಮಾಡುವ ಅವಕಾಶ ಸಿಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಸಿನಿಮಾ ರದ್ದಾದರೂ ಹೊಸ ಕಾಂಬಿನೇಷನ್ಗೆ ಅವಕಾಶ!
ಫಹಾದ್ ಫಾಸಿಲ್ ಮತ್ತು ಇಮ್ತಿಯಾಜ್ ಅಲಿ ಅವರಂತಹ ಇಬ್ಬರು ಪ್ರತಿಭಾವಂತರು ಒಂದೇ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿತ್ತು.
ಆದರೆ ಸಿನಿಮಾ ಕೈಬಿಟ್ಟಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆದರೂ ಇಬ್ಬರೂ ಭವಿಷ್ಯದಲ್ಲಿ ಒಟ್ಟಿಗೆ ಕೆಲಸ ಮಾಡುವ ಆಸಕ್ತಿ ವ್ಯಕ್ತಪಡಿಸಿರುವುದರಿಂದ ಮತ್ತೊಂದು ಹೊಸ ಸಿನಿಮಾದಲ್ಲಿ ಈ ಕಾಂಬಿನೇಷನ್ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ಫಹಾದ್!
ಇತ್ತ ಫಹಾದ್ ಫಾಸಿಲ್ ತಮ್ಮ ಮುಂದಿನ ಸಿನಿಮಾ ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಕರಾಟೆ ಚಂದ್ರನ್’ ಸೇರಿದಂತೆ ಹಲವು ಚಿತ್ರಗಳೊಂದಿಗೆ ಅವರ ಹೆಸರು ಕೇಳಿಬರುತ್ತಿದೆ. ಜೊತೆಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಆವೇಶಂ 2’ ಚಿತ್ರದಲ್ಲಿಯೂ ಫಹಾದ್ ನಟಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.