ಅಕ್ಷರ ಗಾತ್ರ

ಕರೆಂಟ್ ಬಳಸುವ ಸಮಯದ ಮೇಲೆಯೇ ಬಿಲ್ ನಿರ್ಧಾರ: 2027ರಿಂದ ಹೊಸ ನಿಯಮ ಜಾರಿ!

ವಿದ್ಯುತ್ ಬಳಕೆಯ ಸಮಯ ಆಧರಿಸಿ ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸುತ್ತಿದೆ. 2027ರ ಏಪ್ರಿಲ್ 1ರಿಂದ ಆರಂಭವಾಗಲಿರುವ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Central Electricity Ministry new power tariff ToD system rules in Karnataka India
2027ರ ಏಪ್ರಿಲ್ 1ರಿಂದ ಜಾರಿಯಾಗಲಿರುವ ಹೊಸ 'ಟೈಮ್ ಆಫ್ ದಿ ಡೇ' (ToD) ವಿದ್ಯುತ್ ದರ ನಿಗದಿ ವ್ಯವಸ್ಥೆ.

ನವದೆಹಲಿ: ವಿದ್ಯುತ್ ಬಳಕೆಯ ಸಮಯಕ್ಕೆ ಅನುಗುಣವಾಗಿ ಶುಲ್ಕ ವಿಧಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ವಿದ್ಯುತ್ ಸಚಿವಾಲಯ ಮುಂದಾಗಿದೆ.

ಇದಕ್ಕಾಗಿ ‘ಟೈಮ್ ಆಫ್ ದಿ ಡೇ’ (Time of the Day – ToD) ದರ ನಿಗದಿ ನಿಯಮಾವಳಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹೊಸ ವ್ಯವಸ್ಥೆ ಜಾರಿಯಾದರೆ ಗ್ರಾಹಕರು ಯಾವ ಸಮಯದಲ್ಲಿ ವಿದ್ಯುತ್ ಬಳಸುತ್ತಾರೆ ಎಂಬುದರ ಆಧಾರದ ಮೇಲೆ ಬಿಲ್ ಮೊತ್ತ ನಿರ್ಧಾರವಾಗಲಿದೆ.

ಹೊಸ ನಿಯಮದ ಪ್ರಕಾರ, ದಿನದ ವಿವಿಧ ಸಮಯಗಳಲ್ಲಿ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪ್ರತ್ಯೇಕ ಸ್ಲಾಟ್‌ಗಳನ್ನು ನಿಗದಿಪಡಿಸಲಾಗುತ್ತದೆ. ಹೆಚ್ಚಿನ ಬೇಡಿಕೆ ಇರುವ ಸಮಯದಲ್ಲಿ ವಿದ್ಯುತ್ ಬಳಸಿದರೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಬೇಡಿಕೆ ಕಡಿಮೆ ಇರುವ ಅವಧಿಯಲ್ಲಿ ವಿದ್ಯುತ್ ಬಳಕೆ ಮಾಡಿದರೆ ಕಡಿಮೆ ದರ ಅನ್ವಯವಾಗಲಿದೆ. ಹೀಗಾಗಿ ಹಗಲು ಮತ್ತು ರಾತ್ರಿ ವಿದ್ಯುತ್ ಬಳಕೆಯ ಶುಲ್ಕದಲ್ಲಿ ವ್ಯತ್ಯಾಸ ಕಂಡುಬರಲಿದೆ.

ಈ ಸಂಬಂಧ ಕರಡು ನಿಯಮಾವಳಿ ಸಿದ್ಧಪಡಿಸಲಾಗಿದ್ದು, 2027ರ ಏಪ್ರಿಲ್ 1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. 2029ರ ಏಪ್ರಿಲ್ ವೇಳೆಗೆ ಬಹುತೇಕ ಎಲ್ಲ ಗ್ರಾಹಕರನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಮೊದಲ ಹಂತದಲ್ಲಿ 10 ಕಿಲೋವ್ಯಾಟ್‌ಗಿಂತ ಹೆಚ್ಚಿನ ಗರಿಷ್ಠ ವಿದ್ಯುತ್ ಬೇಡಿಕೆ ಹೊಂದಿರುವ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ. 2028ರ ಏಪ್ರಿಲ್ 1ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಉಳಿದ ಗ್ರಾಹಕರನ್ನು 2029ರ ಏಪ್ರಿಲ್ 1ರೊಳಗೆ ಹೊಸ ವ್ಯವಸ್ಥೆಗೆ ಒಳಪಡಿಸುವ ಗುರಿ ಹೊಂದಲಾಗಿದೆ.

ಆದರೆ, ಕೃಷಿ ವಿದ್ಯುತ್ ಗ್ರಾಹಕರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ವಿದ್ಯುತ್ ದರ ಮತ್ತು ವಿವಿಧ ಸಮಯದ ಸ್ಲಾಟ್‌ಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಆಯಾ ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ವಹಿಸಲಾಗಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.