ನಗೋಯಾ: ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಪುರುಷರ 400 ಮೀಟರ್ ಓಟದಲ್ಲಿ ಸಂದೀಪ್ ಸಿಂಗ್ ಮನ್ ಹಾಗೂ ಜಾವೆಲಿನ್ ಎಸೆತದಲ್ಲಿ ಹ್ಯಾನಿ ಚಿನ್ನದ ಪದಕ ಗೆದ್ದಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಭಾರತದ ಅಜಯ್ ಕುಮಾರ್ ಕಂಚಿನ ಪದಕ ಗೆದ್ದು ದೇಶಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ.
ಪುರುಷರ 400 ಮೀಟರ್ ಓಟದಲ್ಲಿ ಸಂದೀಪ್ ಸಿಂಗ್ ಮನ್ 52.28 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಓಟದ ಆರಂಭದಿಂದಲೇ ಮುನ್ನಡೆ ಸಾಧಿಸಿದ್ದ ಸಂದೀಪ್, ಅಂತಿಮ ಹಂತದವರೆಗೂ ಅದನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಸೌದಿ ಅರೇಬಿಯಾದ ಅಲ್ಸಾನಾ ನೂರ್ ಕೊನೆಯ ಕ್ಷಣಗಳಲ್ಲಿ ತೀವ್ರ ಪೈಪೋಟಿ ನೀಡಿದರೂ, ಸಂದೀಪ್ ಸಿಂಗ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಅಜಯ್ ಕುಮಾರ್ 53.61 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದಿದ್ದಾರೆ.
ಇನ್ನು ಪುರುಷರ ಜಾವೆಲಿನ್ ಎಫ್37/38 ವಿಭಾಗದಲ್ಲಿ ಭಾರತದ ಹ್ಯಾನಿ ಅಮೋಘ ಪ್ರದರ್ಶನ ನೀಡಿದ್ದಾರೆ. ಐದನೇ ಪ್ರಯತ್ನದಲ್ಲಿ 59.72 ಮೀಟರ್ ದೂರ ಜಾವೆಲಿನ್ ಎಸೆದು ವಿಶ್ವ ದಾಖಲೆ ನಿರ್ಮಿಸಿದ ಅವರು, ಆರನೇ ಪ್ರಯತ್ನದಲ್ಲಿ 60.49 ಮೀಟರ್ ದೂರ ಎಸೆಯುವ ಮೂಲಕ ತಮ್ಮದೇ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ ಎಂದು ವರದಿಯಾಗಿದೆ. ಈ ಸಾಧನೆಯೊಂದಿಗೆ ಹ್ಯಾನಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಂದೀಪ್ ಸಿಂಗ್ ಮನ್ ಮತ್ತು ಹ್ಯಾನಿ ಅವರ ಚಿನ್ನದ ಸಾಧನೆಯೊಂದಿಗೆ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳ ಉತ್ತಮ ಪ್ರದರ್ಶನ ಮುಂದುವರಿದಿದ್ದು, ಪದಕಗಳ ಸಾಧನೆ ದೇಶದ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
