ಅಕ್ಷರ ಗಾತ್ರ

ರೈತರನ್ನು ಭಿಕ್ಷುಕರು ಎಂದುಕೊಂಡಿದ್ದೀರಾ? ಬರ ಪರಿಹಾರ ವಿಚಾರವಾಗಿ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ

ಮಾಧ್ಯಮಗೋಷ್ಟಿಯಲ್ಲಿ ಸರ್ಕಾರದ ವಿರುದ್ಧ ಮಾತನಾಡುತ್ತಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ.

ಬೆಂಗಳೂರು: ಬರ ಪರಿಹಾರ ನೀಡುವ ವಿಚಾರದಲ್ಲಿ ಸಣ್ಣ ರೈತರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ರೈತರನ್ನು ಭಿಕ್ಷುಕರು ಎಂದು ಭಾವಿಸಿದೆಯೇ? ಅವರಿಗೆ ಸ್ವಾಭಿಮಾನ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರದ ವಿಚಾರದಲ್ಲಿ ಸರ್ಕಾರ ಇಷ್ಟು ಕಡಿಮೆ ಮೊತ್ತದ ಪರಿಹಾರ ನೀಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಪ್ರತಿ ಗುಂಟೆಗೆ 85 ರೂಪಾಯಿ ನೀಡಿದರೆ, ಎಕರೆಗೆ ಸುಮಾರು 3,400 ರೂಪಾಯಿ ಆಗುತ್ತದೆ. ಆದರೆ ಎಕರೆಗೆ 2,500 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಸಣ್ಣ ಪ್ರಮಾಣದ ಜಮೀನು ಹೊಂದಿರುವ ರೈತರಿಗೆ ಕೇವಲ 400ರಿಂದ 500 ರೂಪಾಯಿ ಮಾತ್ರ ಸಿಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ನೀಡುತ್ತಿರುವ ಪರಿಹಾರ ರೈತರನ್ನು ಅಪಹಾಸ್ಯ ಮಾಡಿದಂತಿದೆ. ರೈತರನ್ನು ಭಿಕ್ಷುಕರು ಎಂದುಕೊಂಡಿದ್ದೀರಾ? ಅವರಿಗೆ ಸ್ವಾಭಿಮಾನ ಇಲ್ಲವೇ? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲೂ ಸರ್ಕಾರದ ವಿರುದ್ಧ ವಾಗ್ದಾಳಿ

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಮಾತನಾಡಿದ ಅವರು, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಸರ್ಕಾರ ಮಹಿಳೆಯರಿಗೆ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿದರು. ಎಲ್ಲರಿಗೂ ಉಚಿತ ಸೌಲಭ್ಯ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ, ಚುನಾವಣೆ ಮುಗಿದ ಬಳಿಕ ಜನರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಟೀಕಿಸಿದರು.

ಚುನಾವಣೆ ಗೆಲ್ಲಲು ಅಮ್ಮ, ಅಪ್ಪ ಎಂದು ಜನರ ಬಳಿ ಬಂದವರು, ಅಧಿಕಾರಕ್ಕೆ ಬಂದ ನಂತರ ಜನರು ಏನು ಬೇಕಾದರೂ ಮಾಡಿಕೊಳ್ಳಲಿ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದು ದಗಾಕೋರ ಸರ್ಕಾರ ಎಂದು ಕಿಡಿಕಾರಿದರು.

ಇದೀಗ ರೈತರ ವಿಚಾರದಲ್ಲಿಯೂ ಇದೇ ರೀತಿಯ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ಬರ ಪರಿಹಾರದ ಹೆಸರಿನಲ್ಲಿ ಸಣ್ಣ ರೈತರಿಗೆ ಅಲ್ಪ ಮೊತ್ತ ನೀಡುವ ಮೂಲಕ ಅವರನ್ನು ಅವಮಾನಿಸಲಾಗುತ್ತಿದೆ. ರೈತರ ವಿಚಾರದಲ್ಲಿ ಸರ್ಕಾರದ ನಡೆ ಖಂಡನೀಯ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.