ಅಕ್ಷರ ಗಾತ್ರ

ಪಟಾಕಿ ಹೊಗೆಯಿಂದ ದೆಹಲಿ ಉಸಿರುಗಟ್ಟುವ ಸ್ಥಿತಿ; ಹಲವು ಪ್ರದೇಶಗಳಲ್ಲಿ AQI 400 ಪ್ಲಸ್

ದೆಹಲಿ ಹೆದ್ದಾರಿಯಲ್ಲಿ ದಟ್ಟ ಹೊಗೆ ಮತ್ತು ಮಂಜಿನ ನಡುವೆ ಸಾಗುತ್ತಿರುವ ವಾಹನಗಳು.

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ನಡುವೆ ರಾಷ್ಟ್ರ ರಾಜಧಾನಿ ದೆಹಲಿ ಮಾತ್ರ ಹೊಗೆಯ ನಗರವಾಗಿ ಮಾರ್ಪಟ್ಟಿದೆ.

ಎಲ್ಲೆಡೆ ಪಟಾಕಿಗಳ ಸದ್ದು, ಸಂಭ್ರಮದ ವಾತಾವರಣದ ಬೆನ್ನಲ್ಲೇ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಭಾರೀ ಏರಿಕೆಯಾಗಿದೆ. ಸೋಮವಾರ ಬೆಳಗ್ಗೆ ನಗರದ ಬಹುತೇಕ ಪ್ರದೇಶಗಳು ದಟ್ಟ ಹೊಗೆ ಮತ್ತು ಮಂಜಿನಿಂದ ಆವೃತವಾಗಿದ್ದು, ಜನರು ಶುದ್ಧ ಗಾಳಿಗಾಗಿ ಪರದಾಡುವಂತಾಗಿದೆ.

ಮುಂಜಾನೆಯೇ ರಸ್ತೆಗಳ ಮೇಲೆ ದಟ್ಟ ಹೊಗೆ ಆವರಿಸಿದ್ದರಿಂದ ವಾಹನ ಸವಾರರಿಗೆ ಎದುರಿನ ವಾಹನಗಳು ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಪರಿಣಾಮ ಹಲವು ಕಡೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 400ರ ಗಡಿ ದಾಟಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ಸಮೀರ್ ಆ್ಯಪ್ ನೀಡಿರುವ ಮಾಹಿತಿಯ ಪ್ರಕಾರ, ನವೆಂಬರ್ 8ರ ರಾತ್ರಿ 11:05ಕ್ಕೆ ದೆಹಲಿಯ ಒಟ್ಟಾರೆ ಎಕ್ಯೂಐ 373ರಷ್ಟಿತ್ತು. ಆದರೆ ಸೋಮವಾರ ಮುಂಜಾನೆ ವೇಳೆಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆಲಿಪುರ, ಬವಾನಾ, ಚಾಂದಿನಿ ಚೌಕ್, ಮುಂಡ್ಕಾ, ಪಂಜಾಬಿ ಬಾಗ್, ರೋಹಿಣಿ ಹಾಗೂ ವಿವೇಕ್ ವಿಹಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಕ್ಯೂಐ 400ರ ಗಡಿ ದಾಟಿದೆ.

ಇನ್ನು ದೆಹಲಿಯ ಸುತ್ತಮುತ್ತಲಿನ ನಗರಗಳೂ ಮಾಲಿನ್ಯದ ಹೊಡೆತಕ್ಕೆ ಸಿಲುಕಿವೆ. ನೋಯ್ಡಾದಲ್ಲಿ 319, ಗಾಜಿಯಾಬಾದ್‌ನಲ್ಲಿ 360, ಗುರುಗ್ರಾಮ್‌ನಲ್ಲಿ 280 ಹಾಗೂ ಫರಿದಾಬಾದ್‌ನಲ್ಲಿ 297 ಎಕ್ಯೂಐ ದಾಖಲಾಗಿದೆ.

ಒಂದೆಡೆ ದೀಪಾವಳಿ ಹಬ್ಬದ ಸಂಭ್ರಮ, ಮತ್ತೊಂದೆಡೆ ಉಸಿರಾಡುವ ಗಾಳಿಯೇ ಕಲುಷಿತವಾಗಿರುವ ಪರಿಸ್ಥಿತಿ. ದೆಹಲಿಯ ಜನಜೀವನದ ಮೇಲೆ ವಾಯುಮಾಲಿನ್ಯದ ಪರಿಣಾಮ ಮತ್ತೆ ಆತಂಕ ಸೃಷ್ಟಿಸಿದ್ದು, ಸಾರ್ವಜನಿಕರ ಆರೋಗ್ಯದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.