ಅಕ್ಷರ ಗಾತ್ರ

ಒಡಿಶಾ ಕರಾವಳಿಗೆ ಅಪ್ಪಳಿಸಿದ ಅಕ್ವಾನ್ ಚಂಡಮಾರುತ; 3 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ!

ಒಡಿಶಾ ಕರಾವಳಿಗೆ ಅಪ್ಪಳಿಸಿದ ಅಕ್ವಾನ್ ಚಂಡಮಾರುತ; 3 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ!

ಭುವನೇಶ್ವರ: ಒಡಿಶಾ ಹಾಗೂ ಉತ್ತರ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಆತಂಕ ಸೃಷ್ಟಿಸಿದ್ದ ಅಕ್ವಾನ್ ಚಂಡಮಾರುತ ಇಂದು ಬೆಳಗ್ಗೆ ಒಡಿಶಾದ ಗೋಪಾಲಪುರ ಸಮೀಪ ಕರಾವಳಿಯನ್ನು ದಾಟಿದೆ.

ಬೆಳಗ್ಗೆ 7:30ರಿಂದ 8:30ರ ನಡುವಿನ ಅವಧಿಯಲ್ಲಿ ಚಂಡಮಾರುತದ ಪ್ರಭಾವ ಕಾಣಿಸಿಕೊಂಡಿದ್ದು, ಗಂಟೆಗೆ 70ರಿಂದ 80 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ. ಗಾಳಿಯ ವೇಗ ಕೆಲವೆಡೆ ಗಂಟೆಗೆ 90 ಕಿ.ಮೀ. ತಲುಪಿದೆ. ಹವಾಮಾನ ಇಲಾಖೆಯ ವರ್ಗೀಕರಣದ ಪ್ರಕಾರ ತೀವ್ರ ಚಂಡಮಾರುತದ ಸ್ವರೂಪದಲ್ಲಿದ್ದ ಅಕ್ವಾನ್, ಕರಾವಳಿಗೆ ಅಪ್ಪಳಿಸುವ ಮುನ್ನ ಮುಂಜಾನೆ 2:30ರ ಸುಮಾರಿಗೆ ದುರ್ಬಲಗೊಂಡು ಸಾಮಾನ್ಯ ಚಂಡಮಾರುತವಾಗಿ ಮಾರ್ಪಟ್ಟಿತ್ತು. ಕಳೆದ 24 ದಿನಗಳಲ್ಲಿ ಒಡಿಶಾ ಎದುರಿಸುತ್ತಿರುವ ಮೂರನೇ ಚಂಡಮಾರುತ ಇದಾಗಿದೆ.

3 ಲಕ್ಷಕ್ಕೂ ಹೆಚ್ಚು ಜನರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ:

ಚಂಡಮಾರುತದಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಒಡಿಶಾ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಗುರುವಾರ ಸಂಜೆಯ ವೇಳೆಗೆ ಅಪಾಯದ ಪ್ರದೇಶಗಳಲ್ಲಿದ್ದ ಸುಮಾರು 2.98 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇವರಿಗೆ 2,523 ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಇನ್ನು ಸಂಭಾವ್ಯ ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ 9,341 ಆಶ್ರಯ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸೇರಿದಂತೆ ಒಟ್ಟು 423 ತಂಡಗಳನ್ನು ನಿಯೋಜಿಸಲಾಗಿದೆ.

41 ರೈಲುಗಳ ಸಂಚಾರ ರದ್ದು, 29 ರೈಲುಗಳ ವೇಳಾಪಟ್ಟಿ ಬದಲು:

ಚಂಡಮಾರುತದ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆಯೂ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಪೂರ್ವ ಕರಾವಳಿ ರೈಲ್ವೆ ವಲಯದಲ್ಲಿ 41 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 29 ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಅದೇ ರೀತಿ ಆಗ್ನೇಯ ರೈಲ್ವೆ ವಲಯವು ಶುಕ್ರವಾರ ಪುರಿಗೆ ತೆರಳುವ ಅಥವಾ ಪುರಿ ಮಾರ್ಗವಾಗಿ ಸಂಚರಿಸುವ ಕನಿಷ್ಠ 28 ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ:

ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಚಂಡಮಾರುತದ ಪರಿಣಾಮವಾಗಿ ಕರಾವಳಿ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಆಡಳಿತ ಮತ್ತು ರಕ್ಷಣಾ ತಂಡಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿವೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.