ಅಕ್ಷರ ಗಾತ್ರ

ದೀಪಾವಳಿವರೆಗೆ ಪ್ರತಿಭಟನೆಗೆ ಬ್ರೇಕ್ ಹಾಕಿದ ಕಾಕ್ರೋಚ್ ಜನತಾ ಪಾರ್ಟಿ!

ಮೈಕ್ ಹಿಡಿದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ Abhijeet Dipke.

ನವದೆಹಲಿ: ಮುಂಬರುವ ದೀಪಾವಳಿ ಹಬ್ಬದವರೆಗೆ ಯಾವುದೇ ಪ್ರತಿಭಟನೆಗಳನ್ನು ಆಯೋಜಿಸುವ ಉದ್ದೇಶವಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರ ಹೋರಾಟದಲ್ಲಿ ಭಾಗವಹಿಸಿರುವ ಕಾರ್ಯಕರ್ತರು ಹಾಗೂ ಬೆಂಬಲಿಗರು ತಾತ್ಕಾಲಿಕ ವಿರಾಮ ಪಡೆದು ಕುಟುಂಬದವರೊಂದಿಗೆ ಹಬ್ಬದ ಸಮಯ ಕಳೆಯುವಂತೆ ಮನವಿ ಮಾಡಿದ್ದಾರೆ.

ಇತ್ತೀಚಿನ ಬೆಳವಣಿಗೆಗಳಿಂದ ಕಾರ್ಯಕರ್ತರ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ. ಕಳೆದ ಕೆಲವು ದಿನಗಳು ಸುಲಭವಾಗಿರಲಿಲ್ಲ. ಹೀಗಾಗಿ ಹೋರಾಟದಿಂದ ಕೆಲ ದಿನಗಳ ಕಾಲ ಬಿಡುವು ಪಡೆದು ಕುಟುಂಬ ಹಾಗೂ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ ಎಂದು ದೀಪ್ಕೆ ಕರೆ ನೀಡಿದ್ದಾರೆ.

ಇದೇ ವೇಳೆ ಸಿಜೆಪಿ ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಐದು ದಿನಗಳ ನ್ಯಾಯಾಂಗ ಬಂಧನ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ದೀಪ್ಕೆ, ಹಲವು ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಿ, ವಶಕ್ಕೆ ಪಡೆದು ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಜೈಲಿನಲ್ಲಿರುವ ಸೌರವ್ ಮತ್ತು ಅಶುತೋಷ್ ಹಬ್ಬದ ಸಂದರ್ಭದಲ್ಲಿ ಕುಟುಂಬದಿಂದ ದೂರ ಉಳಿಯಬೇಕಾಗಿದೆ. ಹೀಗಾಗಿ ಹಬ್ಬ ಆಚರಿಸುವಾಗ ಅವರಿಬ್ಬರನ್ನೂ ನೆನಪಿಸಿಕೊಳ್ಳುವಂತೆ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.

ಹೋರಾಟದಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅಹಿಂಸೆಯ ಮಾರ್ಗದಿಂದ ಹಿಂದೆ ಸರಿಯಬಾರದು. ಪ್ರಚೋದನೆಗಳಿಗೆ ಒಳಗಾಗಿ ದ್ವೇಷಕ್ಕೆ ಅವಕಾಶ ನೀಡಬಾರದು ಎಂದು ದೀಪ್ಕೆ ಹೇಳಿದ್ದಾರೆ. ನಾವು ವಿರೋಧಿಸುವ ಮನಸ್ಥಿತಿಯನ್ನೇ ನಮ್ಮೊಳಗೆ ಬೆಳೆಸಿಕೊಳ್ಳಬಾರದು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಸೌರವ್ ಮತ್ತು ಅಶುತೋಷ್ ಜೈಲಿನಿಂದ ಬಿಡುಗಡೆಯಾಗುವಾಗ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯೊಂದಿಗೆ ಹೊರಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ದೀಪ್ಕೆ, ಸಂಕಷ್ಟದ ಸಂದರ್ಭದಲ್ಲಿಯೂ ಶಾಂತಿಯ ಮಾರ್ಗವನ್ನು ಅನುಸರಿಸುವ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.

 

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.