ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಸದ್ಯ ಆಡಳಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜಕೀಯ ಪ್ರವೇಶದ ಸಂದರ್ಭದಲ್ಲಿ ಚಿತ್ರರಂಗಕ್ಕೆ ವಿದಾಯ ಘೋಷಿಸಿದ್ದ ಅವರು, ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದೀಗ ವಿಜಯ್ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಸಿಎಂ ವಿಜಯ್?
ಸಾಮಾನ್ಯವಾಗಿ ಸರ್ಕಾರಗಳು ತಮ್ಮ ಜನಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜನಪ್ರಿಯ ಸಿನಿಮಾ ನಟ-ನಟಿಯರನ್ನು ಬಳಸಿಕೊಳ್ಳುತ್ತವೆ. ಆದರೆ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ್ ಅವರೇ ಸರ್ಕಾರಿ ಯೋಜನೆಗಳ ಪ್ರಚಾರದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.
ರಾಜ್ಯದಲ್ಲಿ ವಿಜಯ್ ಅವರಿಗೆ ಇರುವ ಅಪಾರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಜಾಹೀರಾತಿನಲ್ಲಿ ಅವರನ್ನೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಸಿನಿಮಾ ಮಾದರಿಯಲ್ಲಿ ಜಾಹೀರಾತು ನಿರ್ಮಾಣ:
ಈ ಜಾಹೀರಾತನ್ನು ಸಾಮಾನ್ಯ ಪ್ರಚಾರದ ರೀತಿಯಲ್ಲಿ ಚಿತ್ರೀಕರಿಸದೆ, ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾದರಿಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಚಿತ್ರರಂಗದ ಅನುಭವಿ ತಾಂತ್ರಿಕ ತಂಡವನ್ನು ಬಳಸಿಕೊಳ್ಳಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಈ ವಿಶೇಷ ಜಾಹೀರಾತಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ವರದಿಯೂ ಕುತೂಹಲ ಹೆಚ್ಚಿಸಿದೆ. ತಮ್ಮ ವಿಭಿನ್ನ ದೃಶ್ಯ ನಿರೂಪಣೆಗೆ ಹೆಸರಾಗಿರುವ ಗೌತಮ್ ಮೆನನ್, ವಿಜಯ್ ಅವರನ್ನು ಹೇಗೆ ತೆರೆಯ ಮೇಲೆ ತೋರಿಸಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಎರಡು ದಿನಗಳ ಕಾಲ್ಶೀಟ್ ನೀಡಿದ ವಿಜಯ್?
ವರದಿಗಳ ಪ್ರಕಾರ, ಈ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಖ್ಯಮಂತ್ರಿ ವಿಜಯ್ ಎರಡು ದಿನಗಳ ಕಾಲಾವಕಾಶ ನೀಡಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ಐದು ಕ್ಷೇತ್ರಗಳ ಉಪಚುನಾವಣೆಗಳು ಮುಗಿದ ಬಳಿಕ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ, ಸಿನಿಮಾಗಳಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ವಿಜಯ್ ಇದೀಗ ಸರ್ಕಾರಿ ಜಾಹೀರಾತಿನ ಮೂಲಕ ಮತ್ತೆ ಕ್ಯಾಮೆರಾ ಮುಂದೆ ಬರಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.