ಅಕ್ಷರ ಗಾತ್ರ

Breaking News: ದೀಪಾವಳಿ ಪಾರ್ಟಿ ಹೆಸರಲ್ಲಿ ಡ್ರ*ಗ್ಸ್ ದಂಧೆ? ವಿಲ್ಲಾದಲ್ಲಿ ಸಿಸಿಬಿ ದಾಳಿ; ಮೂವರು ಅ*ರೆಸ್ಟ್!

Bengaluru ನಲ್ಲಿ ಡ್ರಗ್ಸ್ ದಂಧೆ ಸಂಬಂಧ ಬಂಧಿತರಾದ ಆರೋಪಿಗಳು ಮತ್ತು ತನಿಖಾಧಿಕಾರಿಗಳು.

ಬೆಂಗಳೂರು: ದೀಪಾವಳಿ ಹಬ್ಬ ಅಂದರೆ ಬೆಳಕಿನ ಹಬ್ಬ, ಸಂಭ್ರಮದ ಆಚರಣೆ. ಆದರೆ ಬೆಂಗಳೂರಿನಲ್ಲಿ ಇದೇ ಹಬ್ಬದ ಹೆಸರಿನಲ್ಲಿ ನಡೆದಿದ್ದ ಪೂಲ್ ಪಾರ್ಟಿಯೊಂದರಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ.

ಹೈಟೆಕ್ ಸ್ವಿಮ್ಮಿಂಗ್ ಪೂಲ್, ಡಿಜೆ ಸಂಭ್ರಮ, ವಿದೇಶಿ ಮದ್ಯದ ಜೊತೆಗೆ ಗಾಂಜಾ ಮತ್ತು ಎಂಡಿಎಂಎ ಕೂಡ ಬಳಕೆಯಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆಯೋಜಕರನ್ನು ಬಂಧಿಸಿದ್ದಾರೆ.

ಅಷ್ಟಕ್ಕೂ ಈ ಪಾರ್ಟಿ ನಡೆದಿದ್ದು ಎಲ್ಲಿ ಗೊತ್ತಾ? ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ಕರಿಯಮ್ಮನ ಅಗ್ರಹಾರದಲ್ಲಿರುವ ವಿಲ್ಲಾದಲ್ಲಿ. ರಾತ್ರಿ 9 ಗಂಟೆಗೆ ಶುರುವಾಗುತ್ತಿದ್ದ ಪಾರ್ಟಿ ಬೆಳಗಿನ ಜಾವ 5 ಗಂಟೆಯವರೆಗೂ ನಡೆಯುತ್ತಿತ್ತು. ನೋಡಲು ಸಾಮಾನ್ಯ ಪೂಲ್ ಪಾರ್ಟಿಯಂತೆ ಕಂಡರೂ, ಒಳಗೆ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು.

50 ಜೋಡಿಗಳಿಗೆ ಮಾತ್ರ ಎಂಟ್ರಿ!

ಈ ಪಾರ್ಟಿಗೆ ಎಲ್ಲರಿಗೂ ಪ್ರವೇಶ ಇರಲಿಲ್ಲ. ಕೇವಲ 50 ಜೋಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. FV Social 404 ಮತ್ತು Hopzyx ಎಂಬ ಆ್ಯಪ್‌ಗಳ ಮೂಲಕ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ.

ಇನ್ನು ಪಾರ್ಟಿಗೆ ಪ್ರವೇಶ ಪಡೆಯಲು ಯುವಕರು 1,710 ರೂಪಾಯಿ, ಯುವತಿಯರು 1,080 ರೂಪಾಯಿ ಹಾಗೂ ಜೋಡಿಗಳು 2,400 ರೂಪಾಯಿ ಪಾವತಿಸಬೇಕಿತ್ತು. ಹೀಗೆ ಪ್ರತ್ಯೇಕ ಪ್ರವೇಶ ಶುಲ್ಕ ನಿಗದಿಪಡಿಸಿ ಪಾರ್ಟಿ ಆಯೋಜಿಸಲಾಗಿತ್ತು.

ದಾಳಿಯಲ್ಲಿ ಸಿಕ್ಕಿದ್ದೇನು?

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಗಾಂಜಾ, ಎಂಡಿಎಂಎ, ವಿದೇಶಿ ಮದ್ಯ ಹಾಗೂ ನಿಷೇಧಿತ ಹುಕ್ಕಾಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪಾರ್ಟಿ ಆಯೋಜಕರಾದ ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಎಂಬುವವರನ್ನು ಬಂಧಿಸಲಾಗಿದೆ.

ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪಾರ್ಟಿಗೆ ಮಾದಕ ವಸ್ತುಗಳು ಎಲ್ಲಿಂದ ಬಂದವು? ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದರು? ಪಾರ್ಟಿಯ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ? ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹಬ್ಬದ ಸಂಭ್ರಮದ ಹೆಸರಿನಲ್ಲಿ ನಡೆದ ಈ ಪಾರ್ಟಿಯ ಹಿಂದಿನ ಸಂಪೂರ್ಣ ಜಾಲ ತನಿಖೆಯಿಂದ ಹೊರಬರಬೇಕಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.