ಬೆಂಗಳೂರು: ಜೀವನದಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ವಿಚ್ಛೇದಿತ ಮಹಿಳೆಗೆ ಯುವಕನೊಬ್ಬ ವಂಚಿಸಿರುವ ಆರೋಪ ಕೇಳಿಬಂದಿದೆ.
ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ಬೆಳೆಸಿದ್ದಲ್ಲದೆ, ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ, ದುಬಾರಿ ಬೈಕ್ ಮತ್ತು ಐಫೋನ್ ಉಡುಗೊರೆಯಾಗಿ ಪಡೆದಿದ್ದಾನೆ ಎನ್ನಲಾಗಿದೆ. ಐದು ತಿಂಗಳ ಪ್ರೀತಿಯ ಬಳಿಕ ಮದುವೆಗೆ ನಿರಾಕರಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವ ಆರೋಪ ಎದುರಿಸುತ್ತಿರುವ ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಚ್ಛೇದನದ ಬಳಿಕ ಪರಿಚಯವಾದ ಯುವಕ!
ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಮಹಿಳೆಗೆ ಸುಮಾರು 20 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಪತಿಯೊಂದಿಗಿನ ಮನಸ್ತಾಪದಿಂದ 2026ರ ಮಾರ್ಚ್‌ನಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 11ನೇ ತರಗತಿ ಓದುತ್ತಿರುವ ಮಗನೊಂದಿಗೆ ಕೆ.ಜಿ. ಹಳ್ಳಿಯಲ್ಲಿ ವಾಸವಾಗಿದ್ದರು.

ಈ ನಡುವೆ ಮೇ ತಿಂಗಳಲ್ಲಿ ಬಸ್ ನಿಲ್ದಾಣವೊಂದರಲ್ಲಿ ಶೇಖ್ ಮೊಹಮ್ಮದ್ ತೈಯೀಬ್ ಪರಿಚಯವಾಗಿದ್ದ. ಮೊದಲಿಗೆ ಸ್ನೇಹಿತರಾಗಿದ್ದ ಇಬ್ಬರ ನಡುವೆ ನಂತರ ಪ್ರೀತಿ ಬೆಳೆದಿತ್ತು. ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ತಾಹೀರ್, ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪ್ರೀತಿಯ ಹೆಸರಲ್ಲಿ ದುಬಾರಿ ಉಡುಗೊರೆ ಪಡೆದ ಆರೋಪ!
ಮಹಿಳೆಯೊಂದಿಗೆ ಸುಮಾರು ಐದು ತಿಂಗಳ ಕಾಲ ಸಂಬಂಧದಲ್ಲಿದ್ದ ತಾಹೀರ್, ಆಕೆಯಿಂದ ದುಬಾರಿ ಬೈಕ್ ಹಾಗೂ ಐಫೋನ್ ಉಡುಗೊರೆಯಾಗಿ ಪಡೆದಿದ್ದಾನೆ ಎನ್ನಲಾಗಿದೆ. ಆದರೆ ಉಡುಗೊರೆಗಳನ್ನು ಪಡೆದ ಬಳಿಕ ಆತನ ವರ್ತನೆ ಬದಲಾಗಿತ್ತು. ಕೊನೆಗೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ಮಹಿಳೆಯಿಂದ ದೂರವಾಗಿದ್ದಾನೆ. ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪ್ರಿಯಕರನಿಗಾಗಿ ಹೈದರಾಬಾದ್‌ವರೆಗೂ ಹುಡುಕಾಟ!
ತಾಹೀರ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಆತನಿಗಾಗಿ ಹುಡುಕಾಟ ಆರಂಭಿಸಿದ್ದರು. ಆತನ ಸುಳಿವು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೈದರಾಬಾದ್‌ನಲ್ಲಿರುವ ಮನೆಗೂ ತೆರಳಿ ವಿಚಾರಿಸಿದ್ದಾರೆ. ಆದರೆ ಅಲ್ಲಿ ಕೂಡ ತಾಹೀರ್ ಪತ್ತೆಯಾಗಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ವಾಪಸ್ಸಾದ ಮಹಿಳೆ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ.
ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.