ಅಕ್ಷರ ಗಾತ್ರ

ದೀಪಾವಳಿ ಸಂಭ್ರಮದ ನಡುವೆ ದೇಶಾದ್ಯಂತ ಸರಣಿ ದುರಂತ; ಅಗ್ನಿ ಅವಘಡಗಳಲ್ಲಿ 18 ಮಂದಿ ಸಾ*ವು! ಬಸ್ ಅಪಘಾತದಲ್ಲಿ 3 ಬ*ಲಿ

ದೀಪಾವಳಿ ಹಬ್ಬದಲ್ಲಿ ಕೈಯಲ್ಲಿ ಹಿಡಿದು ಬೆಂಕಿ ಹಚ್ಚುತ್ತಿರುವ ಅಪಾಯಕಾರಿ ಪಟಾಕಿ.

ಭೋಪಾಲ್/ಮುಂಬೈ: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದರೆ, ಮತ್ತೊಂದೆಡೆ ಸರಣಿ ದುರಂತಗಳು ಹಲವು ಕುಟುಂಬಗಳ ಸಂತೋಷವನ್ನೇ ಕಸಿದುಕೊಂಡಿವೆ.

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಗ್ನಿ ಅವಘಡಗಳಲ್ಲಿ ಆರು ಮಕ್ಕಳೂ ಸೇರಿದಂತೆ ಒಟ್ಟು 18 ಮಂದಿ ಸಜೀವ ದಹನವಾಗಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಖಾಸಗಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಮೃತಪಟ್ಟಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ಎರಡು ಅಗ್ನಿ ದುರಂತ; 12 ಮಂದಿ ಸಾವು:

ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಛಪಾರಾ ಪಟ್ಟಣದ ಮಹಾವೀರ್ ವಾರ್ಡ್‌ನ ಜೈನ್ ಮೊಹಲ್ಲಾದಲ್ಲಿ ಮೊದಲ ಅಗ್ನಿ ದುರಂತ ಸಂಭವಿಸಿದೆ. ಆಭರಣ ವ್ಯಾಪಾರಿ ಕುಂದನ್ ಸೋನಿ ಅವರಿಗೆ ಸೇರಿದ ಮೂರು ಅಂತಸ್ತಿನ ಮನೆಯಲ್ಲಿ ರಾತ್ರಿ ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರು ಗಾಢ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಬೆಂಕಿ ವೇಗವಾಗಿ ವ್ಯಾಪಿಸಿದೆ.

ಈ ದುರಂತದಲ್ಲಿ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಮನೆಯಲ್ಲಿ ಒಟ್ಟು 10 ಮಂದಿ ಇದ್ದು, ನಾಲ್ವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ಇನ್ನು ಕಟ್ನಿ ಜಿಲ್ಲೆಯ ಬರಹಿ ಪಟ್ಟಣದಲ್ಲೂ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದೆ. ದೀಪಾವಳಿ ಪೂಜೆಯ ಬಳಿಕ ರಾತ್ರಿ ಸುಮಾರು 11:30ಕ್ಕೆ ಪೂರಣ್ ಅಗರವಾಲ್ ಮತ್ತು ರಿತೇಶ್ ಅಗರವಾಲ್ ಅವರಿಗೆ ಸೇರಿದ ಪಾತ್ರೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅಂಗಡಿಯ ಮೇಲಿದ್ದ ಮೂರು ಅಂತಸ್ತಿನ ಕಟ್ಟಡಕ್ಕೂ ಬೆಂಕಿ ವ್ಯಾಪಿಸಿದೆ.

ಕಟ್ಟಡದಲ್ಲಿ ಮಲಗಿದ್ದ ಅಗರವಾಲ್ ಕುಟುಂಬದ ಆರು ಮಂದಿ ಬೆಂಕಿಯಿಂದ ಹೊರಬರಲಾಗದೆ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ವೃದ್ಧರು, ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಓರ್ವ ಪುರುಷ ಮತ್ತು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರದಲ್ಲೂ ಒಂದೇ ಕುಟುಂಬದ ಆರು ಮಂದಿ ಬಲಿ:

ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಯೇಡ್ಶಿ ಗ್ರಾಮದಲ್ಲೂ ಅಗ್ನಿ ದುರಂತ ಸಂಭವಿಸಿದೆ. ಗೋವಿಂದ ಕರಾಂಡೆ ಅವರಿಗೆ ಸೇರಿದ ಕಿರಾಣಿ ಅಂಗಡಿಯ ಮೇಲಿನ ಮಹಡಿಯಲ್ಲಿ ಕುಟುಂಬ ವಾಸವಾಗಿತ್ತು. ರಾತ್ರಿ ಸುಮಾರು 2:30ಕ್ಕೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಇಡೀ ಮನೆಗೆ ವ್ಯಾಪಿಸಿದೆ.

ಈ ವೇಳೆ ಉಸಿರುಗಟ್ಟಿ ಹಾಗೂ ಸುಟ್ಟ ಗಾಯಗಳಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಕುಟುಂಬದ ಓರ್ವ ಸದಸ್ಯ ಮಾತ್ರ ಬದುಕುಳಿದಿದ್ದಾರೆ. ಹೀಗೆ ಮಧ್ಯಪ್ರದೇಶದ ಎರಡು ಹಾಗೂ ಮಹಾರಾಷ್ಟ್ರದ ಒಂದು ಅಗ್ನಿ ಅವಘಡದಲ್ಲಿ ಒಟ್ಟು 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ದೀಪಾವಳಿ ಪಟಾಕಿಯಿಂದ ದೇಶಾದ್ಯಂತ ಅವಘಡ:

ಇನ್ನು ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಸಿಡಿತದಿಂದ ದೇಶದ ವಿವಿಧ ನಗರಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ದೆಹಲಿಯೊಂದರಲ್ಲೇ 42 ಮಂದಿಗೆ ಸುಟ್ಟ ಗಾಯಗಳಾಗಿದ್ದು, 11 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ದೆಹಲಿ, ಪುಣೆ ಮತ್ತು ಮುಂಬೈ ನಗರಗಳಲ್ಲಿಯೂ ಹಲವು ಅಗ್ನಿ ಅವಘಡಗಳು ಸಂಭವಿಸಿವೆ. ದೆಹಲಿಯಲ್ಲಿ 135, ಪುಣೆಯಲ್ಲಿ ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ 94 ಹಾಗೂ ಮುಂಬೈನಲ್ಲಿ 142 ಅಗ್ನಿ ಅವಘಡಗಳು ವರದಿಯಾಗಿವೆ. ಮುಂಬೈನಲ್ಲಿ ಸಂಭವಿಸಿದ ಅವಘಡಗಳ ಪೈಕಿ 137 ಪ್ರಕರಣಗಳು ದೀಪಾವಳಿ ಪಟಾಕಿಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಪಟಾಕಿ ಸಂಭ್ರಮದ ವೇಳೆ 10 ವರ್ಷದ ಬಾಲಕ ಮೃತಪಟ್ಟಿದ್ದು, 269 ಮಂದಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಪಟಾಕಿ ಅವಘಡಗಳಿಂದ 73 ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದಲ್ಲಿ ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಸ್ ಕಂದಕಕ್ಕೆ ಉರುಳಿ ಮೂವರು ಸಾವು:

ಇನ್ನೊಂದೆಡೆ ಉತ್ತರ ಪ್ರದೇಶದ ಲಖನೌ-ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 40 ಅಡಿ ಆಳದ ಕಂದಕಕ್ಕೆ ಉರುಳಿದೆ. ಪರಿಣಾಮ ಮೂವರು ಪ್ರಯಾಣಿಕರು ಮೃತಪಟ್ಟಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಭಿವಾಡಿಯಿಂದ ಬಿಹಾರದ ಛಾಪ್ರಾ ಕಡೆಗೆ ತೆರಳುತ್ತಿದ್ದ ಬಸ್, ಲಖನೌನ ಪಾರಾ ಜೀರೋ ಪಾಯಿಂಟ್ ಸಮೀಪ ಬೆಳಗ್ಗೆ 6:30ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಹಲವು ಪ್ರಯಾಣಿಕರು ಬಸ್‌ನೊಳಗೆ ಸಿಲುಕಿಕೊಂಡಿದ್ದರು.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಸ್‌ನ ಕಿಟಕಿಗಳ ಮೂಲಕ ಪ್ರಯಾಣಿಕರನ್ನು ಹೊರತೆಗೆದು ಆಂಬುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಗಾಯಾಳುಗಳ ಪೈಕಿ 31 ಮಂದಿಯನ್ನು ಲೋಕಬಂಧು ಆಸ್ಪತ್ರೆಗೆ ಹಾಗೂ 13 ಮಂದಿಯನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (KGMU) ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ವರದಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್‌ನ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಒಟ್ಟಿನಲ್ಲಿ, ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಸಂಭವಿಸಿದ ಅಗ್ನಿ ಅವಘಡಗಳು ಹಾಗೂ ರಸ್ತೆ ಅಪಘಾತಗಳು ಹಲವು ಕುಟುಂಬಗಳನ್ನು ದುಃಖದ ಮಡುವಿಗೆ ತಳ್ಳಿವೆ. ಹಬ್ಬದ ಸಂಭ್ರಮ ದುರಂತವಾಗಿ ಪರಿಣಮಿಸಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.