ಬಿಗ್ಬಾಸ್ ಕನ್ನಡ ಮನೆಯಲ್ಲಿ ಈ ವಾರ ಸೌಂದರ್ಯ ಶೆಟ್ಟಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಚಾಣಾಕ್ಷತನ, ತಂತ್ರಗಾರಿಕೆ ಹಾಗೂ ಉತ್ತಮ ಆಟದ ಮೂಲಕ ಒಂದೇ ವಾರದಲ್ಲಿ ಎರಡು ಪ್ರಮುಖ ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಾರದ ಉತ್ತಮ ಆಟಗಾರ್ತಿ ಪ್ರಶಸ್ತಿಯ ಜೊತೆಗೆ ಮನೆಯ ಎರಡನೇ ವಾರದ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಪ್ರತಿವಾರವೂ ವಿಭಿನ್ನ ಟಾಸ್ಕ್ಗಳನ್ನು ನೀಡಲಾಗುತ್ತಿದ್ದು, ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಾರ ಬಿಗ್ಬಾಸ್ ನೀಡಿದ್ದ ‘ಲೂಟಿಕೋರರು ಮತ್ತು ರಕ್ಷಕರು’ ಟಾಸ್ಕ್ನಲ್ಲಿ ಸೌಂದರ್ಯ ಶೆಟ್ಟಿ ತಮ್ಮ ಚಾಣಾಕ್ಷ ಆಟದಿಂದ ಗಮನ ಸೆಳೆದಿದ್ದಾರೆ.
ಈ ಟಾಸ್ಕ್ನಲ್ಲಿ ಸ್ಪರ್ಧಿಗಳನ್ನು ಲೂಟಿಕೋರರು ಮತ್ತು ರಕ್ಷಕರು ಎಂಬ ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. ಲೂಟಿಕೋರರ ತಂಡವು ವಜ್ರ ಹಾಗೂ ಕಿರೀಟವನ್ನು ಕಳ್ಳತನ ಮಾಡುವ ಮೂಲಕ ಟಾಸ್ಕ್ನಲ್ಲಿ ಗೆಲುವು ಸಾಧಿಸಿತು. ಈ ಗೆಲುವಿನಲ್ಲಿ ಸೌಂದರ್ಯ ಶೆಟ್ಟಿ ಅವರ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿತ್ತು ಎನ್ನಲಾಗಿದೆ.
ಟಾಸ್ಕ್ನುದ್ದಕ್ಕೂ ಸೌಂದರ್ಯ ತಮ್ಮ ಚುರುಕುತನ, ಸಮಯಪ್ರಜ್ಞೆ ಹಾಗೂ ಚಾಣಾಕ್ಷತನವನ್ನು ಪ್ರದರ್ಶಿಸಿದರು. ಆಟದಲ್ಲಿ ಎದುರಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ಮನೆಯ ಸದಸ್ಯರಿಗೆ ಮನರಂಜನೆಯನ್ನೂ ನೀಡಿದರು. ಅವರ ಪ್ರದರ್ಶನವನ್ನು ಮೆಚ್ಚಿದ ಮನೆಯ ಸದಸ್ಯರು ಬಹುಮತದ ಮೂಲಕ ವಾರದ ಉತ್ತಮ ಆಟಗಾರ್ತಿಯಾಗಿ ಆಯ್ಕೆ ಮಾಡಿದರು.

ಇದರೊಂದಿಗೆ ಸೌಂದರ್ಯ ಶೆಟ್ಟಿ ಅವರಿಗೆ ವಾರದ ಉತ್ತಮ ಆಟಗಾರ್ತಿ ಪದಕ ಲಭಿಸಿತು. ಆದರೆ ಅವರ ಗೆಲುವಿನ ಓಟ ಅಲ್ಲಿಗೇ ನಿಲ್ಲಲಿಲ್ಲ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಮನೆಯ ನಾಯಕತ್ವವನ್ನು ತಮ್ಮದಾಗಿಸಿಕೊಂಡಿದ್ದಾರೆ.
‘ಲೂಟಿಕೋರರು ಮತ್ತು ರಕ್ಷಕರು’ ಟಾಸ್ಕ್ನಲ್ಲಿ ಗೆಲುವು ಸಾಧಿಸಿದ ತಂಡದ ಸದಸ್ಯರಿಗೆ ಕ್ಯಾಪ್ಟನ್ಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಅದರಂತೆ ನಡೆದ ಮೊದಲ ಹಂತದ ಸ್ಪರ್ಧೆಯಲ್ಲಿ ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಗೆಲುವು ಸಾಧಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು.
ಕ್ಯಾಪ್ಟನ್ಸಿ ಆಯ್ಕೆಗಾಗಿ ನಡೆದ ಅಂತಿಮ ಸುತ್ತಿನಲ್ಲಿ ಇಬ್ಬರಿಗೂ ಬ್ಯಾಲೆನ್ಸ್ ಮಾಡುವ ಸವಾಲಿನ ಟಾಸ್ಕ್ ನೀಡಲಾಗಿತ್ತು. ಈ ವೇಳೆ ತಮ್ಮ ಏಕಾಗ್ರತೆ ಹಾಗೂ ಸಮತೋಲನ ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಿದ ಸೌಂದರ್ಯ ಶೆಟ್ಟಿ, ಆಸಿಯಾ ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸಿದರು.
ಈ ಮೂಲಕ ಸೌಂದರ್ಯ ಶೆಟ್ಟಿ ಬಿಗ್ಬಾಸ್ ಮನೆಯ ಎರಡನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಒಂದೇ ವಾರದಲ್ಲಿ ಉತ್ತಮ ಆಟಗಾರ್ತಿ ಪ್ರಶಸ್ತಿ ಹಾಗೂ ಕ್ಯಾಪ್ಟನ್ ಪಟ್ಟ ದೊರೆತಿರುವುದು ಅವರಿಗೆ ಡಬಲ್ ಸಂಭ್ರಮ ತಂದಿದೆ.