ಅಕ್ಷರ ಗಾತ್ರ

ಬುಲೆಟ್ ರೈಲು ಯೋಜನೆಗೆ ಈಗಾಗಲೇ 92,761 ಕೋಟಿ ಖರ್ಚು; ಪೂರ್ಣಗೊಳ್ಳುವುದು ಯಾವಾಗ?

ಹಳಿಗಳ ಮೇಲೆ ಸಂಚರಿಸಲು ಸಿದ್ಧವಾಗಿರುವ ಭಾರತದ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ಮಾದರಿ.

ಅಹಮದಾಬಾದ್: ದೇಶದ ಮಹತ್ವಾಕಾಂಕ್ಷೆಯ ಅಹಮದಾಬಾದ್‌-ಮುಂಬೈ ಬುಲೆಟ್ ರೈಲು ಯೋಜನೆಯ ವೆಚ್ಚ ಆರಂಭಿಕ ಅಂದಾಜಿಗಿಂತ ಸುಮಾರು ದುಪ್ಪಟ್ಟಾಗಿದೆ.

1.08 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದ್ದ ಯೋಜನೆಯ ಪರಿಷ್ಕೃತ ವೆಚ್ಚ ಇದೀಗ 2,02,797 ಕೋಟಿ ರೂ.ಗೆ ಏರಿಕೆಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕೇಳಲಾದ ಪ್ರಶ್ನೆಗೆ ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ನಿಯಮಿತ (NHSRCL) ನೀಡಿರುವ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಮಾರ್ಚ್ 2026ರ ಅಂತ್ಯದ ವೇಳೆಗೆ ಈ ಯೋಜನೆಗಾಗಿ ಈಗಾಗಲೇ 92,761 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರ, ಗುಜರಾತ್ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ಮೂಲಕ ಹಾದುಹೋಗುವ 508 ಕಿ.ಮೀ. ಉದ್ದದ ಈ ಯೋಜನೆಗೆ ಭೂಸ್ವಾಧೀನ ಪರಿಹಾರ ಸೇರಿದಂತೆ ಹಲವು ಕಾರಣಗಳಿಂದ ವಿಳಂಬವಾಗಿದೆ.

ಆರಂಭದಲ್ಲಿ 2023ರ ವೇಳೆಗೆ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಇದೀಗ ಯೋಜನೆ ಪೂರ್ಣಗೊಳ್ಳುವ ನಿಖರ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲ. ಎಲ್ಲಾ ಗುತ್ತಿಗೆ ಪ್ಯಾಕೇಜ್‌ಗಳನ್ನು ವಹಿಸಿದ ಬಳಿಕವಷ್ಟೇ ಪೂರ್ಣಗೊಳಿಸುವ ಅಂದಾಜು ಸಮಯವನ್ನು ನಿರ್ಧರಿಸಲು ಸಾಧ್ಯ ಎಂದು NHSRCL ತಿಳಿಸಿದೆ.

ಇನ್ನು ಬುಲೆಟ್ ರೈಲುಗಳ ವಿಚಾರದಲ್ಲೂ ಮಹತ್ವದ ಬದಲಾವಣೆಯಾಗಿದೆ. ಆರಂಭದಲ್ಲಿ ಜಪಾನ್‌ನ ಶಿಂಕಾನ್ಸೆನ್ ರೈಲುಗಳನ್ನು ಬಳಸಿ ಸೇವೆ ಆರಂಭಿಸಲು ಯೋಜಿಸಲಾಗಿತ್ತು. ಆದರೆ ಇದೀಗ ಸ್ವದೇಶಿ ನಿರ್ಮಿತ ರೈಲು ಸೆಟ್‌ಗಳ ಮೂಲಕ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ.

ಭಾರತದ BEML ಸಂಸ್ಥೆಯು ಮೊದಲ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಸೆಟ್ ಅನ್ನು 2027ರ ಫೆಬ್ರವರಿಯಲ್ಲಿ ರವಾನಿಸಲು ಯೋಜಿಸಿದೆ. ಬಳಿಕ ಉಳಿದ ರೈಲು ಸೆಟ್‌ಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು ಎಂದು ನಿಗಮ ಮಾಹಿತಿ ನೀಡಿದೆ.

ಇದೇ ವೇಳೆ, ಸಿಗ್ನಲಿಂಗ್ ವ್ಯವಸ್ಥೆ ಖರೀದಿ ವಿಚಾರದಲ್ಲಿ ಭಾರತ ಮತ್ತು ಜಪಾನ್ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳಿಗೆ ಸಂಬಂಧಿಸಿದ ಪತ್ರವ್ಯವಹಾರದ ದಾಖಲೆಗಳನ್ನು ನೀಡಲು NHSRCL ನಿರಾಕರಿಸಿದೆ. ಉಭಯ ಸರ್ಕಾರಗಳ ನಡುವಿನ ಗೌಪ್ಯತಾ ಒಪ್ಪಂದದ ಕಾರಣದಿಂದ ದಾಖಲೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, ಭಾರತದಲ್ಲಿ ತಯಾರಾದ ರೈಲುಗಳನ್ನು ಬಳಸಲು ಜಪಾನ್ ಸರ್ಕಾರ ಅನುಮೋದನೆ ನೀಡಿದೆಯೇ ಅಥವಾ ಆಕ್ಷೇಪ ವ್ಯಕ್ತಪಡಿಸಿದೆಯೇ ಎಂಬ ಮಾಹಿತಿಯನ್ನೂ ನಿಗಮ ಹಂಚಿಕೊಂಡಿಲ್ಲ. ವಿದೇಶಿ ಸರ್ಕಾರದಿಂದ ಗೌಪ್ಯವಾಗಿ ಪಡೆದ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡುವ RTI ಕಾಯ್ದೆಯ ನಿಯಮವನ್ನು ಇದಕ್ಕೆ ಉಲ್ಲೇಖಿಸಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.