ಬೆಂಗಳೂರು: ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ನದಿಯಲ್ಲೇ, ಅವರ ಮೃತದೇಹ ಹೊರತೆಗೆಯಲು ಹೋದ ವ್ಯಕ್ತಿಯೂ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುಗಳೂರಿನಲ್ಲಿ ನಡೆದಿದೆ.
ದಕ್ಷಿಣ ಪಿನಾಕಿನಿ ನದಿಗೆ ಹಾರಿದ್ದ ಕವಿತಾ ಮೃತಪಟ್ಟಿದ್ದು, ಅವರ ಮೃತದೇಹ ಹೊರತೆಗೆಯಲು ನೀರಿಗಿಳಿದ ಮಂಜುನಾಥ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಘಟನೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಜಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದಾಗಲೇ ಯಾವುದೇ ರಕ್ಷಣಾ ಪರಿಕರಗಳಿಲ್ಲದೆ ಮಂಜುನಾಥ್ ನದಿಗೆ ಇಳಿದಿದ್ದಾರೆ ಎನ್ನಲಾಗಿದೆ. ಅವರನ್ನು ತಡೆಯಲು ಪೊಲೀಸರು ಮುಂದಾಗಲಿಲ್ಲ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಮಂಜುನಾಥ್ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
15 ವರ್ಷಗಳ ದಾಂಪತ್ಯದಲ್ಲಿ ಕಿರುಕುಳದ ಆರೋಪ:

ಇನ್ನೊಂದೆಡೆ, ಕವಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರಿ ಮುನಿರತ್ನ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಕವಿತಾ ಮತ್ತು ಶ್ರೀನಿವಾಸ್‌ಗೆ ಮದುವೆಯಾಗಿ 15 ವರ್ಷಗಳಾಗಿತ್ತು. ಮದುವೆಯಾದ ಆರಂಭದಿಂದಲೇ ಪತಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಭಾನುವಾರ ದಂಪತಿ ನಡುವೆ ಮತ್ತೆ ಜಗಳ ನಡೆದಿತ್ತು. ಈ ವೇಳೆ ಕವಿತಾ ಮಗುವನ್ನು ಕರೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಮಗುವನ್ನು ರಕ್ಷಿಸಿದ್ದಾರೆ. ಆದರೆ ಕವಿತಾ ನದಿಗೆ ಹಾರಿ ಮೃತಪಟ್ಟಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.
ಕವಿತಾ ಸಾವಿಗೆ ಪತಿ ಶ್ರೀನಿವಾಸ್ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಮಂಜುನಾಥ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.