ಬ್ರೆಜಿಲಿಯನ್ ಮಾಡೆಲ್ ಹಾಗೂ ನಟಿ ಲಾರಿಸಾ ಬೋನೆಸಿ ಇದೀಗ ಬಾಲಿವುಡ್ನಲ್ಲಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗಿನ ಡೇಟಿಂಗ್ ವದಂತಿಗಳಿಂದ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆ ಶಾರುಖ್ ಖಾನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಲಾರಿಸಾ, ಭಾರತದ ಮೇಲಿನ ತಮ್ಮ ಪ್ರೀತಿಯನ್ನೂ ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರ ಬದುಕು ಮತ್ತು ವೃತ್ತಿಜೀವನದ ಕುರಿತ ಮಾಹಿತಿ ಇಲ್ಲಿದೆ.
16 ವರ್ಷಗಳಿಂದ ಭಾರತದಲ್ಲೇ ನೆಲೆಸಿರುವ ಲಾರಿಸಾ
ಸುಮಾರು 16 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಭಾರತಕ್ಕೆ ಬಂದ ಲಾರಿಸಾ ಬೋನೆಸಿ, ಬಳಿಕ ಮುಂಬೈನಲ್ಲಿ ನೆಲೆಸಿದರು. ಮಾಡೆಲಿಂಗ್, ಸಿನಿಮಾ ಹಾಗೂ ಮ್ಯೂಸಿಕ್ ವಿಡಿಯೋಗಳ ಮೂಲಕ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಭಾರತಕ್ಕೆ ಬಂದಾಗ ಇಲ್ಲಿನ ಜನರು ತೋರಿದ ಆತ್ಮೀಯತೆ ತಮ್ಮನ್ನು ಸೆಳೆಯಿತು. ಹೀಗಾಗಿ ಇಲ್ಲಿಯೇ ಉಳಿಯಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ.
ತಾವು ಬ್ರೆಜಿಲಿಯನ್ಗಿಂತ ಹೆಚ್ಚು ಭಾರತೀಯಳಂತೆ ಭಾವಿಸುತ್ತೇನೆ ಎಂದು ಹೇಳಿರುವ ಲಾರಿಸಾ, ರಿಕ್ಷಾ ಚಾಲಕರೊಂದಿಗೆ ಮಾತನಾಡುತ್ತಾ ಹಿಂದಿ ಕಲಿತಿದ್ದಾಗಿ ತಮಾಷೆಯಾಗಿ ನೆನಪಿಸಿಕೊಂಡಿದ್ದಾರೆ. ಸದ್ಯ ಆರು ಭಾಷೆಗಳನ್ನು ಮಾತನಾಡಬಲ್ಲೆ ಎಂದು ತಿಳಿಸಿದ್ದಾರೆ.

ಸಿನಿಮಾ ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ನಟನೆ
‘ದೇಸಿ ಬಾಯ್ಸ್’ ಚಿತ್ರದ ಹಾಡಿನ ಮೂಲಕ ಲಾರಿಸಾ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದರು. ಬಳಿಕ ‘ಗೋ ಗೋವಾ ಗೋನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ತೆಲುಗಿನ ‘ನೆಕ್ಸ್ಟ್ ಏಂಟಿ’ ಸಿನಿಮಾದಲ್ಲೂ ನಟಿಸಿದ್ದಾರೆ. ಇದರ ಜೊತೆಗೆ ಹಲವು ಜನಪ್ರಿಯ ಮ್ಯೂಸಿಕ್ ವಿಡಿಯೋಗಳಲ್ಲಿಯೂ ಅಭಿನಯಿಸಿದ್ದಾರೆ.
ಇತ್ತೀಚೆಗೆ ನಟ ಹೃತಿಕ್ ರೋಷನ್ ಜೊತೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದ ಲಾರಿಸಾ, ಇದೀಗ ವಿಕ್ರಮ್ ಭಟ್ ನಿರ್ದೇಶನದ ‘1920: ಕೋಲ್ಡ್ ವಿಂಟರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಹಾನ್ ಶೆಟ್ಟಿ ಮತ್ತು ಅನನ್ಯ ಸಿಂಗ್ ಕೂಡ ಅಭಿನಯಿಸುತ್ತಿದ್ದಾರೆ.
ಆರ್ಯನ್ ಖಾನ್ ಜೊತೆ ಡೇಟಿಂಗ್ ವದಂತಿ
ಆರ್ಯನ್ ಖಾನ್ ಜೊತೆ ಲಾರಿಸಾ ಬೋನೆಸಿ ಹೆಸರು ಹಲವು ಬಾರಿ ಕೇಳಿಬಂದಿದೆ. ಖಾನ್ ಕುಟುಂಬದ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. 2025ರ ಸೆಪ್ಟೆಂಬರ್ನಲ್ಲಿ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ಚಿತ್ರದ ಪ್ರೀಮಿಯರ್ ಕಾರ್ಯಕ್ರಮದಲ್ಲಿಯೂ ಲಾರಿಸಾ ಭಾಗವಹಿಸಿದ್ದರು.
ಇದರಿಂದಾಗಿ ಇಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಆದರೆ, ಡೇಟಿಂಗ್ ವದಂತಿಗಳ ಬಗ್ಗೆ ಆರ್ಯನ್ ಖಾನ್ ಆಗಲಿ, ಲಾರಿಸಾ ಬೋನೆಸಿ ಆಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.