ಬೆಂಗಳೂರು: ಬೆಂಗಳೂರಿನ ಜಿಗಣಿಯಲ್ಲಿರುವ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ. ಐದು ದಶಕಗಳ ಸುದೀರ್ಘ ಪಯಣವನ್ನು ಪೂರ್ಣಗೊಳಿಸಿರುವ ಪ್ರಶಾಂತಿ ಕುಟೀರ, ಯೋಗವನ್ನು ಕೇವಲ ದೈಹಿಕ ವ್ಯಾಯಾಮಕ್ಕೆ ಸೀಮಿತಗೊಳಿಸದೆ ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯ ಕ್ಷೇತ್ರಗಳೊಂದಿಗೆ ಬೆಸೆಯುವ ಮೂಲಕ ಮಹತ್ವದ ಗುರುತನ್ನು ಪಡೆದುಕೊಂಡಿದೆ.
1975ರಲ್ಲಿ ಸ್ಥಾಪನೆಯಾದ ಪ್ರಶಾಂತಿ ಕುಟೀರದ ಮುಖ್ಯ ಉದ್ದೇಶ ಆಧುನಿಕ ವಿಜ್ಞಾನ ಮತ್ತು ಭಾರತದ ಆಧ್ಯಾತ್ಮಿಕ ಜ್ಞಾನ ಪರಂಪರೆಯ ನಡುವೆ ಸೇತುವೆ ನಿರ್ಮಿಸುವುದಾಗಿದೆ. ಇದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್-ವ್ಯಾಸ)ದ ಪ್ರಮುಖ ವಸತಿ ಕೇಂದ್ರವಾಗಿದೆ. ಯೋಗ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ವಿಶೇಷ ಆದ್ಯತೆ ನೀಡುವ ಎಸ್-ವ್ಯಾಸ ಸಂಸ್ಥೆಗೆ 2002ರಲ್ಲಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಮಾನ್ಯತೆ ದೊರೆತಿದೆ.
ಯೋಗದ ವೈಜ್ಞಾನಿಕ ಅಧ್ಯಯನಕ್ಕೆ ಪ್ರಶಾಂತಿ ಕುಟೀರ ಮಹತ್ವದ ಕೊಡುಗೆ ನೀಡಿದೆ. ಯೋಗವನ್ನು ದೈಹಿಕ, ಮಾನಸಿಕ ಹಾಗೂ ಸಮಗ್ರ ಆರೋಗ್ಯದ ದೃಷ್ಟಿಕೋನದಿಂದ ಅಧ್ಯಯನ ಮಾಡುವುದರ ಜೊತೆಗೆ, ಶಿಕ್ಷಣ ಮತ್ತು ಸಂಶೋಧನೆಗೆ ಸಾಂಸ್ಥಿಕ ರೂಪ ನೀಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಎಸ್-ವ್ಯಾಸದ ಮೂಲಕ ಯೋಗ ಚಿಕಿತ್ಸಾ ಶಿಕ್ಷಣ ಸೇರಿದಂತೆ ಹಲವು ಯೋಗ ಆಧಾರಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಇನ್ನು ಪ್ರಶಾಂತಿ ಕುಟೀರದ ಆವರಣದಲ್ಲಿರುವ ಆರೋಗ್ಯಧಾಮವು ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳನ್ನು ಸಂಯೋಜಿಸಿ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಈ ಮೂಲಕ ಯೋಗವನ್ನು ಆರೋಗ್ಯ ಮತ್ತು ಚಿಕಿತ್ಸೆಯ ವಿಶಾಲ ಪರಿಕಲ್ಪನೆಯೊಂದಿಗೆ ಬೆಸೆಯುವ ಪ್ರಯತ್ನ ನಡೆಯುತ್ತಿದೆ.

ನವೆಂಬರ್ 13ರಿಂದ 23ರವರೆಗೆ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ‘ವಿಕಸಿತ ಭಾರತ 2047 ಕಡೆಗೆ’ ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ. ಐದು ದಶಕಗಳ ಸಂಸ್ಥೆಯ ಸೇವೆ ಮತ್ತು ಸಾಧನೆಯನ್ನು ಸ್ಮರಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಆಡಳಿತಾತ್ಮಕ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕೇರಳದ ತಿರುವನಂತಪುರದಲ್ಲಿ ಎಸ್-ವ್ಯಾಸದ ಆಫ್-ಕ್ಯಾಂಪಸ್ಗೂ ಚಾಲನೆ ನೀಡಲಾಗಿದೆ.
ಇದೇ ಕಾರ್ಯಕ್ರಮದ ಮೂಲಕ ಬೆಂಗಳೂರಿನಲ್ಲಿ ಜನಿಸಿದ ವಿಶಿಷ್ಟ ಚಿಂತಕ, ಬರಹಗಾರ ಹಾಗೂ ಸಂಘಟಕರಾಗಿದ್ದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ ಅವರ ಜನ್ಮ ಶತಮಾನೋತ್ಸವವನ್ನೂ ಸ್ಮರಿಸಲಾಗುತ್ತಿದೆ.
1926ರಲ್ಲಿ ಜನಿಸಿದ ಶೇಷಾದ್ರಿ ಅವರು 1946ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಯಾಗಿದ್ದರು. 1987ರಿಂದ 2000ರವರೆಗೆ ಸಂಘದ ಸರ್ಕಾರ್ಯವಾಹರಾಗಿ ಸೇವೆ ಸಲ್ಲಿಸಿದ್ದರು. ಎಸ್-ವ್ಯಾಸ ಸಂಸ್ಥೆಯ ಹಿಂದಿನ ದೃಷ್ಟಾರರಲ್ಲಿ ಒಬ್ಬರಾಗಿದ್ದ ಅವರು, ಪ್ರಶಾಂತಿ ಕುಟೀರದ ಬೆಳವಣಿಗೆ ಹಾಗೂ ಸಂಸ್ಥೆಯ ಉದ್ದೇಶಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.