ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೀದಿಯಲ್ಲಿ ನಿಂತು ಗದ್ದಲ ಎಬ್ಬಿಸುವ ಬದಲು ಸಂಸತ್ತಿಗೆ ಬಂದು ಮುಖಾಮುಖಿ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ನೇರ ಸವಾಲು ಹಾಕಿದ್ದಾರೆ.
ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸಿದ್ಧವಿರುವುದಾಗಿ ಹೇಳಿದ್ದಾರೆ.
“ರಾಹುಲ್ ಗಾಂಧಿಗೆ ನಾನು ನೇರ ಸವಾಲು ಹಾಕುತ್ತಿದ್ದೇನೆ. ಪ್ರಧಾನಿ ಮೋದಿ ಅವರೊಂದಿಗೆ ನಿಜವಾಗಿಯೂ ಚರ್ಚೆ ನಡೆಸಬೇಕೆಂದಿದ್ದರೆ ಅವರಿಗೆ ಒಂದು ಪತ್ರ ಬರೆಯಿರಿ. ಎಸ್‌ಐಆರ್ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ನಾವು ಸಿದ್ಧರಿದ್ದೇವೆ. ತಾಕತ್ತಿದ್ದರೆ ಸಂಸತ್ತಿಗೆ ಬಂದು ಚರ್ಚೆ ಮಾಡಿ” ಎಂದು ಶಾ ಸವಾಲು ಹಾಕಿದ್ದಾರೆ.
ಚುನಾವಣೆ ಸೋಲಿಗೆ ಎಸ್‌ಐಆರ್ ಕಾರಣವೇ?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ನಿಲುವನ್ನು ಅಮಿತ್ ಶಾ ಟೀಕಿಸಿದ್ದಾರೆ. 2014, 2019 ಮತ್ತು 2024ರ ಚುನಾವಣೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಇರಲಿಲ್ಲ. ಆದರೂ ಕಾಂಗ್ರೆಸ್ ಸೋಲು ಅನುಭವಿಸಿದೆ ಎಂದು ಹೇಳಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿಯೂ ಎಸ್‌ಐಆರ್ ಇರಲಿಲ್ಲ. ಆದರೂ ಕಾಂಗ್ರೆಸ್ ಸೋತಿದೆ ಎಂದು ಲೇವಡಿ ಮಾಡಿದ್ದಾರೆ. ಸಂಸತ್ತಿನ ಕಲಾಪ ಸುಸೂತ್ರವಾಗಿ ನಡೆಯಲು ಅವಕಾಶ ನೀಡದೆ, ಗದ್ದಲ ಎಬ್ಬಿಸುವುದು ಮತ್ತು ಕಲಾಪ ಬಹಿಷ್ಕರಿಸುವುದನ್ನೇ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬೀದಿಗಿಳಿದರೆ ಬಿಜೆಪಿ ಕಾರ್ಯಕರ್ತರಿಂದ ಉತ್ತರ ಎಂದ ಶಾ
ರಾಹುಲ್ ಗಾಂಧಿ ಇದೇ ರೀತಿ ಬೀದಿಗಿಳಿದು ಜನರನ್ನು ಸೇರಿಸಿ ಗಲಭೆ ಸೃಷ್ಟಿಸಲು ಯತ್ನಿಸಿದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ದೇಶದ ಜನರು ನಿರಂತರವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಕಾಂಗ್ರೆಸ್ ಅಥವಾ ಅದರ ವಿರೋಧ ಪಕ್ಷಗಳ ಮೈತ್ರಿಕೂಟದ ಪರವಾಗಿ ಜನರಿಲ್ಲ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ದೇಶಾದ್ಯಂತ 10 ಲಕ್ಷ ಜನರನ್ನು ಸೇರಿಸುವುದಾಗಿ ಕಾಂಗ್ರೆಸ್ ಕರೆ ನೀಡಿತ್ತು. ಆದರೆ 70 ಸಾವಿರ ಜನರ ಸಾಮರ್ಥ್ಯವಿರುವ ಮೈದಾನವೂ ಅರ್ಧದಷ್ಟು ಖಾಲಿಯಾಗಿತ್ತು ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.