ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಅಬ್ಬರ ಮುಂದುವರಿಸಿದೆ. ಬಿಡುಗಡೆಯಾದ ಕೇವಲ 12 ದಿನಗಳಲ್ಲಿ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರದ ಭಾರತೀಯ ಬಾಕ್ಸ್ ಆಫೀಸ್ ದಾಖಲೆಯನ್ನು ಹಿಂದಿಕ್ಕುವ ಮೂಲಕ ಹೊಸ ದಾಖಲೆ ಬರೆದಿದೆ.
ಎರಡನೇ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಕಂಡಿದ್ದ ‘ರಾಮಾಯಣ’, ಶನಿವಾರ 72.90 ಕೋಟಿ ರೂ. ಹಾಗೂ ಭಾನುವಾರ 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ, ವಾರದ ಮೊದಲ ದಿನವಾದ ಸೋಮವಾರ (12ನೇ ದಿನ) ಚಿತ್ರದ ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದೆ. ಅಂದು ಭಾರತದಲ್ಲಿ 32 ಕೋಟಿ ರೂ. ನಿವ್ವಳ ಗಳಿಕೆ ದಾಖಲಿಸಿದೆ.
‘ಆರ್‌ಆರ್‌ಆರ್’ ಚಿತ್ರದ ದಾಖಲೆ ಹಿಂದಿಕ್ಕಿದ ರಾಮಾಯಣ
ಸೋಮವಾರದ ಗಳಿಕೆಯೊಂದಿಗೆ ಭಾರತದಲ್ಲಿ ‘ರಾಮಾಯಣ’ ಚಿತ್ರದ ಒಟ್ಟು ನಿವ್ವಳ ಕಲೆಕ್ಷನ್ 792.60 ಕೋಟಿ ರೂ.ಗೆ ತಲುಪಿದೆ. ಈ ಮೂಲಕ ‘ಆರ್‌ಆರ್‌ಆರ್’ ಚಿತ್ರದ ಭಾರತೀಯ ನಿವ್ವಳ ಕಲೆಕ್ಷನ್ ದಾಖಲೆಯನ್ನು ಮುರಿದಿದೆ.

‘ಆರ್‌ಆರ್‌ಆರ್’ ಸಿನಿಮಾ ಭಾರತದಲ್ಲಿ ಒಟ್ಟಾರೆ 782.20 ಕೋಟಿ ರೂ. ನಿವ್ವಳ ಗಳಿಕೆ ಕಂಡಿತ್ತು. ಇದೀಗ ಬಿಡುಗಡೆಯಾಗಿ ಎರಡು ವಾರ ಪೂರ್ಣಗೊಳ್ಳುವ ಮೊದಲೇ ‘ರಾಮಾಯಣ’ ಈ ದಾಖಲೆಯನ್ನು ಹಿಂದಿಕ್ಕಿರುವುದು ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿಗೆ ಸಾಕ್ಷಿಯಾಗಿದೆ.
ವಿಶ್ವದಾದ್ಯಂತ 1,437 ಕೋಟಿ ರೂ. ಗಳಿಕೆ
ಭಾರತೀಯ ಮಾರುಕಟ್ಟೆಯಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ‘ರಾಮಾಯಣ’ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ 12 ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು 1,437.25 ಕೋಟಿ ರೂ. ಗಳಿಕೆ ಮಾಡಿದೆ.
ಇದರಲ್ಲಿ ಭಾರತದಿಂದ 947.25 ಕೋಟಿ ರೂ. ಹಾಗೂ ವಿದೇಶಿ ಮಾರುಕಟ್ಟೆಗಳಿಂದ 490 ಕೋಟಿ ರೂ. ಆದಾಯ ಬಂದಿದೆ. ಸದ್ಯ ಚಿತ್ರದ ಗಳಿಕೆಯ ನಾಗಾಲೋಟ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಮುರಿಯುವ ನಿರೀಕ್ಷೆ ಮೂಡಿಸಿದೆ.
‘ಪುಷ್ಪ 2’ ದಾಖಲೆಯ ಮೇಲೆ ರಾಮಾಯಣ ಕಣ್ಣು
ವಿಶ್ವಾದ್ಯಂತ 1,742.10 ಕೋಟಿ ರೂ. ಗಳಿಕೆ ಮಾಡಿರುವ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದ ದಾಖಲೆಯತ್ತ ಇದೀಗ ‘ರಾಮಾಯಣ’ ತಂಡದ ಗಮನ ನೆಟ್ಟಿದೆ. ಇದೇ ವೇಗದಲ್ಲಿ ಸಿನಿಮಾ ಗಳಿಕೆ ಮುಂದುವರಿಸಿದರೆ ‘ಪುಷ್ಪ 2’ ದಾಖಲೆಗೆ ಸವಾಲು ಎದುರಾಗುವ ಸಾಧ್ಯತೆಯಿದೆ.