ಅಕ್ಷರ ಗಾತ್ರ

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂ*ದ ಪತ್ನಿ! ಹೃದಯಾಘಾತವೆಂದು ನಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದ ಮಹಿಳೆ

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂ*ದ ಪತ್ನಿ! ಹೃದಯಾಘಾತವೆಂದು ನಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದ ಮಹಿಳೆ

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಪತಿಯನ್ನು ಕೊ*ಲೆ ಮಾಡಿ, ಅದನ್ನು ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಪತಿಯ ಸಾ*ವಿನ ಬಗ್ಗೆ ಅನುಮಾನವೇ ಬರದಂತೆ ನಾಟಕವಾಡಿದ್ದ ಪತ್ನಿ, ಮರಣೋತ್ತರ ಪರೀಕ್ಷೆಯ ವರದಿಯಿಂದಾಗಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಅನಿತಾ ಹಾಗೂ ಆಕೆಯ ಪ್ರಿಯಕರ ಮಧುಸೂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹೃದಯಾಘಾತವೆಂದು ಕುಟುಂಬದವರನ್ನು ನಂಬಿಸಿದ್ದ ಪತ್ನಿ!

ಕಳೆದ ಅಕ್ಟೋಬರ್ 12ರಂದು ದೊಡ್ಡತೋಗೂರಿನ ಮನೆಯಲ್ಲಿ ಉಪೇಂದ್ರ (40) ಎಂಬುವವರು ಮಧ್ಯರಾತ್ರಿ ಮೃತಪಟ್ಟಿದ್ದರು. ಪತಿ ಮೃತಪಟ್ಟ ತಕ್ಷಣ ಅನಿತಾ, ಅವರು ಜಾರಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಆದರೆ, ಇತ್ತೀಚೆಗೆ ಬಂದ ಮರಣೋತ್ತರ ಪರೀಕ್ಷೆಯ ವರದಿ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಉಪೇಂದ್ರ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

ಮಧುಸೂದನ್ ಸುಳಿವು ನೀಡಿದ ಕೊ*ಲೆ ರಹಸ್ಯ!

ಪೊಲೀಸರು ತನಿಖೆ ನಡೆಸಿದಾಗ ಘಟನೆ ನಡೆದ ದಿನ ಉಪೇಂದ್ರ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬರು ಬಂದು ಹೋಗಿರುವ ಸುಳಿವು ಸಿಕ್ಕಿದೆ. ಈ ಮಾಹಿತಿಯ ಆಧಾರದ ಮೇಲೆ ಮಧುಸೂದನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಅನಿತಾಳನ್ನೂ ವಿಚಾರಣೆಗೊಳಪಡಿಸಿದಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ.

ಅನಿತಾ ಹಾಗೂ ಮಧುಸೂದನ್ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಉಪೇಂದ್ರ ಅವರಿಗೆ ತಿಳಿದಿದ್ದರಿಂದ ಮನೆಯಲ್ಲಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಕ್ಟೋಬರ್ 11ರ ರಾತ್ರಿಯೂ ಇಬ್ಬರ ನಡುವೆ ತೀವ್ರ ಗಲಾಟೆ ನಡೆದಿತ್ತು.

‘ಗಂಡನನ್ನು ಮುಗಿಸಿಬಿಡೋಣ ಬಾ’ ಎಂದು ಪ್ರಿಯಕರನಿಗೆ ಕರೆ!

ಗಂಡನ ಜೊತೆಗಿನ ಜಗಳದಿಂದ ಕೋಪಗೊಂಡ ಅನಿತಾ, ತಕ್ಷಣ ತನ್ನ ಪ್ರಿಯಕರ ಮಧುಸೂದನ್‌ಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಳು. ಗಂಡ ಗಲಾಟೆ ಮಾಡುತ್ತಿದ್ದಾನೆ, ಬಂದು ಮುಗಿಸಿಬಿಡೋಣ ಎಂದು ಕರೆಸಿಕೊಂಡಿದ್ದಳು ಎನ್ನಲಾಗಿದೆ.

ಮನೆಗೆ ಬಂದ ಮಧುಸೂದನ್ ನೇರವಾಗಿ ಬೆಡ್‌ರೂಮ್‌ಗೆ ತೆರಳಿ ಉಪೇಂದ್ರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅನಿತಾ ತನ್ನ ಪತಿಯ ಬಾಯಿ ಮತ್ತು ಮೂಗನ್ನು ಮುಚ್ಚಿ ಪ್ರಿಯಕರನಿಗೆ ಸಹಕರಿಸಿದ್ದಾಳೆ. ಕೊನೆಗೆ ಮಧುಸೂದನ್ ಉಪೇಂದ್ರ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಕೊ*ಲೆ ಬಳಿಕ ಹೃದಯಾಘಾತದ ನಾಟಕ!

ಹ*ತ್ಯೆ ಮಾಡಿದ ಬಳಿಕ ಮಧುಸೂದನ್‌ನನ್ನು ಅನಿತಾ ಮನೆಯಿಂದ ವಾಪಸ್ ಕಳುಹಿಸಿದ್ದಳು. ನಂತರ ಪತಿ ಜಾರಿ ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದವರನ್ನು ನಂಬಿಸಲು ಪ್ರಯತ್ನಿಸಿದ್ದಳು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸರ ತನಿಖೆಯಿಂದ ಕೊಲೆಯ ಸಂಚು ಬಯಲಾಗಿದೆ.

ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅನಿತಾ ಮತ್ತು ಮಧುಸೂದನ್‌ನನ್ನು ಬಂಧಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಅಪರಾಧ ಮತ್ತು ಕಾನೂನು ವರದಿಗಾರರು (Crime & Legal Reporter)

NTV ಕನ್ನಡ ಸಂಪಾದಕೀಯ ತಂಡ.