ಅಕ್ಷರ ಗಾತ್ರ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಶಾಕ್: ಪಟ್ಟಣಗೆರೆ ಶೆಡ್ʼನ ಇಬ್ಬರು ಸಾಕ್ಷಿಗಳು ಕೋರ್ಟ್ʼನಲ್ಲಿ ಉಲ್ಟಾ

ರೇಣುಕಾಸ್ವಾಮಿ ಕೇಸ್ ಸಂಬಂಧಿಸಿದಂತೆ ಮೃತ ರೇಣುಕಾಸ್ವಾಮಿ ಮತ್ತು ನಟ Darshan Thoogudeepa ಅವರ ಭಾವಚಿತ್ರಗಳು.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದ ಪಟ್ಟಣಗೆರೆ ಶೆಡ್‌ನ ಇಬ್ಬರು ಕೆಲಸಗಾರರು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿರುವ ಶೆಡ್ ಸಿಬ್ಬಂದಿಯ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ಪಾರ್ಕಿಂಗ್ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಹಾಗೂ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ವಿಜಯ್ ಕುಮಾರ್ ನ್ಯಾಯಾಲಯದ ವಿಚಾರಣೆ ವೇಳೆ ತಮ್ಮ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.

ಕೃತ್ಯ ನಡೆದ ದಿನ ತಾನು ಶೆಡ್‌ನಲ್ಲಿ ಏನನ್ನೂ ನೋಡಿಲ್ಲ. ಘಟನೆ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಮಲ್ಲಿಕಾರ್ಜುನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇನ್ನು ವಿಜಯ್ ಕುಮಾರ್ ಕೂಡ, ತಾನು ಕಚೇರಿಯಿಂದ ಹೊರಗೆ ಬಂದಿಲ್ಲ. ಹೊರಗೆ ನಡೆದ ಘಟನೆಯ ಬಗ್ಗೆ ಯಾವುದೇ ಅರಿವಿಲ್ಲ ಹಾಗೂ ಯಾರನ್ನೂ ನೋಡಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಇದೇ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಕಿರಣ್ ಹಾಗೂ ಭದ್ರತಾ ಸಿಬ್ಬಂದಿ ನರೇಂದ್ರ ಸಿಂಗ್ ಕೂಡ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿದ್ದರು. ಇದೀಗ ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಕೂಡ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ಸಾಕ್ಷ್ಯ ನೀಡಿರುವುದರಿಂದ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಇನ್ನು ಇಬ್ಬರು ಸಾಕ್ಷಿಗಳು ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹಿನ್ನೆಲೆಯಲ್ಲಿ, ಅವರನ್ನು ಪ್ರತಿಕೂಲ ಸಾಕ್ಷಿಗಳೆಂದು ಪರಿಗಣಿಸಿ ಪಾಟಿಸವಾಲಿಗೆ ಅವಕಾಶ ನೀಡುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಸರ್ಕಾರಿ ಅಭಿಯೋಜಕರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಅವರನ್ನು ಪಾಟಿಸವಾಲಿಗೆ ಒಳಪಡಿಸಲು ಡಿಸೆಂಬರ್ 3ರಂದು ಅವಕಾಶ ನೀಡಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಅಪರಾಧ ಮತ್ತು ಕಾನೂನು ವರದಿಗಾರರು (Crime & Legal Reporter)

NTV ಕನ್ನಡ ಸಂಪಾದಕೀಯ ತಂಡ.