ವಿಜಯಪುರ: ಸಿದ್ಧಸಿರಿ ಬ್ಯಾಂಕ್‌ಗೆ ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ ಇಲಾಖೆ (IT) ದಾಳಿ ನಡೆಸಲಿದೆ ಎಂಬ ವದಂತಿಗಳ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕ್‌ಗೆ ಯಾವುದೇ ಅಕ್ರಮದ ನೋಟಿಸ್ ಬಂದಿಲ್ಲ. ಕೇಂದ್ರ ಸಹಕಾರ ಇಲಾಖೆ ಕೇಳಿದ್ದ ಮಾಹಿತಿಗೆ ಈಗಾಗಲೇ ಸಮರ್ಪಕ ಉತ್ತರ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಈ ಹಿಂದೆ ಸಿದ್ಧಸಿರಿ ಬ್ಯಾಂಕ್ ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿತ್ತು. ಇದೀಗ ಅದನ್ನು ಸಿದ್ಧಸಿರಿ ಮಲ್ಟಿ ಸ್ಟೇಟ್ ಮಲ್ಟಿಪರ್ಪಸ್ ಬ್ಯಾಂಕ್ ಆಗಿ ಕೇಂದ್ರ ಸಹಕಾರ ಇಲಾಖೆಯ ಅಡಿಯಲ್ಲಿ ನೋಂದಣಿ ಮಾಡಿಸಲಾಗಿದೆ ಎಂದು ಹೇಳಿದರು.
ಆಗಸ್ಟ್ ತಿಂಗಳಲ್ಲಿ ಕೇಂದ್ರ ಸಹಕಾರ ಇಲಾಖೆಯಿಂದ ಕೆಲವು ಮಾಹಿತಿ ಕೋರಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಸೆಪ್ಟೆಂಬರ್ ತಿಂಗಳಲ್ಲೇ ಉತ್ತರ ಸಲ್ಲಿಸಿದ್ದೇವೆ. ಇದು ಯಾವುದೇ ಆರೋಪದ ನೋಟಿಸ್ ಅಲ್ಲ, ಕೇವಲ ಮಾಹಿತಿ ಕೇಳುವ ಪ್ರಕ್ರಿಯೆಯಾಗಿತ್ತು ಎಂದು ಸ್ಪಷ್ಟಪಡಿಸಿದರು.
ನೋಟಿಸ್ ವೈರಲ್ ಆಗಿದ್ದಕ್ಕೆ ಯತ್ನಾಳ್ ಆಕ್ಷೇಪ

ಆಗಸ್ಟ್‌ನಲ್ಲಿ ನೀಡಲಾಗಿದ್ದ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರವಾಗಿ ಹಲವು ರೀತಿಯ ಚರ್ಚೆಗಳು ನಡೆದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಕಾಯ್ದೆಗಳು ವಿಭಿನ್ನವಾಗಿರುವುದರಿಂದ, ಕೇಂದ್ರ ಸಹಕಾರ ಇಲಾಖೆ ಕೆಲವು ಸ್ಪಷ್ಟನೆಗಳು ಹಾಗೂ ಅಗತ್ಯ ಮಾಹಿತಿಗಳನ್ನು ಕೇಳುವುದು ಸಾಮಾನ್ಯ ಪ್ರಕ್ರಿಯೆ ಎಂದು ಯತ್ನಾಳ್ ಹೇಳಿದ್ದಾರೆ.
ಆದರೆ, ಸಾಮಾನ್ಯವಾಗಿ ನಡೆಯುವ ಮಾಹಿತಿ ಸಂಗ್ರಹ ಪ್ರಕ್ರಿಯೆಯನ್ನೇ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ನಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ.
ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಹಣ ದುರುಪಯೋಗ ಆರೋಪಕ್ಕೆ ತಿರುಗೇಟು
ಇದೇ ವೇಳೆ ಸಿದ್ಧಸಿರಿ ಸಕ್ಕರೆ ಕಾರ್ಖಾನೆಯ ಹಣ ದುರುಪಯೋಗ ಹಾಗೂ ಬೇನಾಮಿ ಆಸ್ತಿ ಹೊಂದಿರುವ ಆರೋಪಗಳಿಗೂ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಸಕ್ಕರೆ ಕಾರ್ಖಾನೆಯ ಮಾಲೀಕರು ತಾವಲ್ಲ, ಸಿದ್ಧಸಿರಿ ಸಹಕಾರಿ ಬ್ಯಾಂಕ್ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಮನಗೌಡ ಬಸನಗೌಡ ಪಾಟೀಲ್ ಅವರು ಸಂಸ್ಥೆಯ ಅಧ್ಯಕ್ಷರಾಗಿದ್ದರೂ, ಕಾರ್ಖಾನೆಯ ಆಸ್ತಿಗಳು ಸಂಸ್ಥೆಗೆ ಸೇರಿವೆ. ತಮ್ಮ ಹೆಸರಿನಲ್ಲಿ ಬೇನಾಮಿ ಆಸ್ತಿ ಇದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಬೇನಾಮಿ ಆಸ್ತಿ ಸಾಬೀತುಪಡಿಸಿದರೆ ₹1 ಕೋಟಿ ಬಹುಮಾನ!
ತಮ್ಮ ಕುಟುಂಬದವರ ಹೆಸರಿನಲ್ಲಿ ಒಂದೇ ಒಂದು ಗುಂಟೆ ಬೇನಾಮಿ ಆಸ್ತಿ ಅಥವಾ ಸಾಲ ಪಡೆದಿರುವುದನ್ನು ಸಾಬೀತುಪಡಿಸುವಂತೆ ಯತ್ನಾಳ್ ಸವಾಲು ಹಾಕಿದ್ದಾರೆ. ತಮ್ಮ ಹೆಸರಿನಲ್ಲಿ ಖಾಸಗಿ ಆಸ್ತಿ ಇದೆ ಎಂಬುದನ್ನು ಯಾರಾದರೂ ದಾಖಲೆಗಳ ಮೂಲಕ ಸಾಬೀತುಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.