ಅಕ್ಷರ ಗಾತ್ರ

‘ಜೈಲರ್ 2’ ಟಿಕೆಟ್ ದರ ಕೇಳಿದ್ರೆ ಶಾಕ್! ಬೆಂಗಳೂರಿನಲ್ಲಿ ₹2,000 ದಾಟಿದ ಬೆಲೆ, ಚೆನ್ನೈನಲ್ಲಿ ಕೇವಲ ₹190!

Jailer 2 ಸಿನಿಮಾದ ಪೋಸ್ಟರ್‌ನಲ್ಲಿ ಸ್ಫೋಟದ ಮುಂದೆ ರಕ್ತಸಿಕ್ತ ಬಟ್ಟೆಯಲ್ಲಿ ನಿಂತಿರುವ Rajinikanth.

ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಹಬ್ಬ! ಆದರೆ ಈ ಬಾರಿ ಆ ಹಬ್ಬ ಆಚರಿಸೋಕೆ ಬೆಂಗಳೂರಿನ ಸಿನಿಪ್ರಿಯರು ಜೇಬು ತುಂಬಾ ಹಣ ಇಟ್ಟುಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಅಕ್ಟೋಬರ್ 15ರಂದು ತೆರೆಗೆ ಬರಲಿದೆ ಎನ್ನಲಾಗಿರುವ ‘ಜೈಲರ್ 2’ ಸಿನಿಮಾದ ಟಿಕೆಟ್ ದರ ಕೇಳಿದ್ರೆ ಅಭಿಮಾನಿಗಳೇ ಶಾಕ್ ಆಗುವಂತಿದೆ. ಚೆನ್ನೈನಲ್ಲಿ ₹190ಕ್ಕೆ ಸಿಗುವ ಟಿಕೆಟ್‌ಗೆ ಬೆಂಗಳೂರಿನಲ್ಲಿ ₹2,000ಕ್ಕೂ ಹೆಚ್ಚು ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ವರದಿಗಳು ಚರ್ಚೆಗೆ ಕಾರಣವಾಗಿವೆ.

ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಬಿಡುಗಡೆಯ ಮುನ್ನವೇ ₹30 ಕೋಟಿಗೂ ಹೆಚ್ಚು ಗಳಿಕೆಯಾಗಿದೆ ಎಂದು ವರದಿಯಾಗಿದೆ.

ಆದರೆ ಸಿನಿಮಾ ಕ್ರೇಜ್‌ಗಿಂತಲೂ ಈಗ ಟಿಕೆಟ್ ದರವೇ ದೊಡ್ಡ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 15ರಂದು ಬೆಳಗ್ಗೆ 6 ಗಂಟೆಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿದ್ದು, ಕೆಲವು ಶೋಗಳ ಕನಿಷ್ಠ ಟಿಕೆಟ್ ದರವೇ ₹900 ಎನ್ನಲಾಗಿದೆ. ಇನ್ನೂ ಕೆಲ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ₹2,000 ಗಡಿ ದಾಟಿದೆ ಎಂಬ ಮಾಹಿತಿ ಹೊರಬಿದ್ದಿದೆ.

ವಿಶೇಷ ಪ್ರದರ್ಶನ ಮಾತ್ರವಲ್ಲ, ಸಾಮಾನ್ಯ ಶೋಗಳ ಟಿಕೆಟ್ ದರವೂ ದುಬಾರಿಯಾಗಿದೆ. ನಗರದ ಮಲ್ಟಿಪ್ಲೆಕ್ಸ್‌ಗಳಲ್ಲಿ ₹400ರಿಂದ ₹550ಕ್ಕೆ ಟಿಕೆಟ್ ದರ ಆರಂಭವಾಗುತ್ತಿದ್ದು, ಪ್ರೀಮಿಯಂ ಸೀಟುಗಳಿಗೆ ₹1,500 ಅಥವಾ ಅದಕ್ಕಿಂತಲೂ ಹೆಚ್ಚು ಹಣ ನಿಗದಿಪಡಿಸಿರುವ ಬಗ್ಗೆ ವರದಿಯಾಗಿದೆ.

ಆದರೆ ಅಸಲಿ ಟ್ವಿಸ್ಟ್ ಇರೋದು ಚೆನ್ನೈನಲ್ಲಿ!

ರಜನೀಕಾಂತ್ ಅವರ ತವರು ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಇದೇ ಸಿನಿಮಾದ ಟಿಕೆಟ್ ದರ ಬೆಂಗಳೂರಿಗಿಂತ ಬಹಳ ಕಡಿಮೆ ಎನ್ನಲಾಗಿದೆ. ಅಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಗರಿಷ್ಠ ದರ ಸುಮಾರು ₹185ರಿಂದ ₹190 ಇದ್ದರೆ, ಕೆಲವು ಟಿಕೆಟ್‌ಗಳು ಕೇವಲ ₹54ಕ್ಕೆ ಲಭ್ಯವಿವೆ ಎಂದು ಹೇಳಲಾಗಿದೆ.

ಅಂದರೆ ಒಂದೇ ಸಿನಿಮಾ ನೋಡಲು ಎರಡು ನಗರಗಳ ಪ್ರೇಕ್ಷಕರು ಪಾವತಿಸಬೇಕಾದ ಹಣದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಚೆನ್ನೈನಲ್ಲಿ ಬೆಳಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ ಎನ್ನಲಾಗಿದ್ದರೆ, ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ರಜನಿ ಹವಾ ಶುರುವಾಗಲಿದೆ ಎಂಬ ಮಾಹಿತಿ ಇದೆ.

ಇನ್ನು ‘ಜೈಲರ್ 2’ ಸಿನಿಮಾದ ಸ್ಟಾರ್ ಕಾಸ್ಟ್ ಕೂಡ ಭಾರಿ ಕುತೂಹಲ ಮೂಡಿಸಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರಕ್ಕೆ ಕಲಾನಿಧಿ ಮಾರನ್ ನಿರ್ಮಾಪಕರಾಗಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ರಜನೀಕಾಂತ್ ಜೊತೆಗೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಜನೀಕಾಂತ್ ಸಿನಿಮಾಗೆ ಕ್ರೇಜ್ ಜೋರಾಗಿದೆ. ಆದರೆ ಬೆಂಗಳೂರಿನ ದುಬಾರಿ ಟಿಕೆಟ್ ದರ ಸಿನಿಪ್ರಿಯರಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

 

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

NTV ಕನ್ನಡ ಸಂಪಾದಕೀಯ ತಂಡ.