ಹಾವೇರಿ: ಒಂದು ಪರೀಕ್ಷೆಯಲ್ಲಿ ಕೇವಲ 25 ಅಂಕ, ಮತ್ತೊಂದು ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕ! ಈ ಅಂಕಗಳ ವ್ಯತ್ಯಾಸವೇ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ಅನುಮಾನಕ್ಕೆ ಕಾರಣವಾಗಿದೆ.
ಪ್ರಕರಣದ ತನಿಖೆ ವೇಳೆ ಪರೀಕ್ಷಾ ಕೇಂದ್ರದಲ್ಲಿ ಗೂಗಲ್ ಲೆನ್ಸ್ ಬಳಸಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದ್ದು, ಇದೀಗ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸೇರಿದಂತೆ ಮೂವರು ಅಮಾನತುಗೊಂಡಿದ್ದಾರೆ.
ಶಂಕರ್ ಬನ್ನೂರು ಎಂಬ ಅಭ್ಯರ್ಥಿ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ 25 ಅಂಕ ಗಳಿಸಿದ್ದರೆ, VAO ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ. ಈ ಅಸಹಜ ಅಂಕಗಳ ವ್ಯತ್ಯಾಸ ಗಮನಿಸಿದ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಮೊಬೈಲ್ ಮೂಲಕ ಗೂಗಲ್ ಲೆನ್ಸ್ ಬಳಸಿರುವ ಅಕ್ರಮ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಶಿಗ್ಗಾಂವಿಯ ಖಾಸಗಿ ಪಿಯು ಕಾಲೇಜಿನ ಪ್ರಾಚಾರ್ಯ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮಾಕಾಂತ ಭಟ್, ಕೊಠಡಿ ಮೇಲ್ವಿಚಾರಕ ಬಸವರಾಜ ಸವಡಿ ಮತ್ತು ಡ್ರೆಸ್‌ಕೋಡ್ ಕರ್ತವ್ಯದಲ್ಲಿದ್ದ ಉಪನ್ಯಾಸಕ ರಾಜು ದುಂಡಪ್ಪನವರ ಅವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಒಟ್ಟಿನಲ್ಲಿ, VAO ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಯ ಅಂಕಗಳ ಸುತ್ತ ಸೃಷ್ಟಿಯಾಗಿದ್ದ ಅನುಮಾನ ಇದೀಗ ಪರೀಕ್ಷಾ ಕೇಂದ್ರದ ಮೂವರ ಅಮಾನತಿಗೆ ಕಾರಣವಾಗಿದೆ.