ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಪ್ರಸಿದ್ಧ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗಿದೆ. ಈ ಮೂಲಕ 11 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು,
ಶಾಸಕರು, ಸಂಸದರು ಹಾಗೂ ಗಣ್ಯರ ಸಮ್ಮುಖದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಗರ್ಭಗುಡಿ ಬಾಗಿಲಿಗೆ ಸೀಲ್ ಹಾಕಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು, ವಿಶೇಷ ದರ್ಶನ ಟಿಕೆಟ್ ಹಾಗೂ ಲಾಡು ಮಾರಾಟದಿಂದ ಬರೋಬ್ಬರಿ ₹25.36 ಕೋಟಿ ಆದಾಯ ಸಂಗ್ರಹವಾಗಿದೆ.
ಶಾಸ್ತ್ರೋಕ್ತವಾಗಿ ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್!
ಹಾಸನಾಂಬೆ ಜಾತ್ರಾ ಮಹೋತ್ಸವದ ಕೊನೆಯ ದಿನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಹಾಜರಿದ್ದ ಗಣ್ಯರು ಸೇರಿದಂತೆ ಕೆಲವರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಅರ್ಚಕರು ದೇವಿಗೆ ಮಾಡಲಾಗಿದ್ದ ವಿಶೇಷ ಅಲಂಕಾರವನ್ನು ತೆರವುಗೊಳಿಸಿದ್ದಾರೆ.

ದೇವಿಗೆ ತೊಡಿಸಲಾಗಿದ್ದ ಆಭರಣಗಳನ್ನು ತೆಗೆದು ಅಲಂಕಾರ ವಿಸರ್ಜನೆ ಪೂಜೆ ನೆರವೇರಿಸಲಾಗಿದೆ. ನಂತರ ಆಭರಣಗಳನ್ನು ಹೊರತಂದು, ಗರ್ಭಗುಡಿಯಲ್ಲಿನ ದೀಪಕ್ಕೆ ಎಣ್ಣೆ ಹಾಕಿ ಸಂಪ್ರದಾಯದಂತೆ ಬಾಗಿಲು ಮುಚ್ಚಲಾಗಿದೆ. ಬಳಿಕ ಗರ್ಭಗುಡಿ ಬಾಗಿಲಿಗೆ ಸೀಲ್ ಹಾಕುವ ಮೂಲಕ ಈ ವರ್ಷದ ದರ್ಶನೋತ್ಸವವನ್ನು ಮುಕ್ತಾಯಗೊಳಿಸಲಾಗಿದೆ.
ಸಚಿವರು, ಡಿಸಿ ಹಾಗೂ ಗಣ್ಯರ ಸಮ್ಮುಖದಲ್ಲಿ ಪೂಜೆ!
ಹಾಸನಾಂಬೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಹಾಗೂ ಅವರ ತಂಡ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಶಾಸಕರು, ಸಂಸದರು ಹಾಗೂ ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗಿದೆ.
30 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, ₹25.36 ಕೋಟಿ ಆದಾಯ!
ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ಭಕ್ತರ ಸಂಖ್ಯೆಯಲ್ಲಿ ಹೊಸ ಇತಿಹಾಸ ಬರೆದಿದೆ. ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಅಷ್ಟೇ ಅಲ್ಲದೆ, ದೇವಸ್ಥಾನಕ್ಕೆ ಈ ಬಾರಿ ಭಾರಿ ಪ್ರಮಾಣದಲ್ಲಿ ಆದಾಯವೂ ಹರಿದುಬಂದಿದೆ. ₹1,000 ಹಾಗೂ ₹300ರ ವಿಶೇಷ ದರ್ಶನ ಟಿಕೆಟ್‌ಗಳು ಮತ್ತು ಲಾಡು ಮಾರಾಟದಿಂದ ಒಟ್ಟು ₹25 ಕೋಟಿ 36 ಲಕ್ಷ ಆದಾಯ ಸಂಗ್ರಹವಾಗಿದೆ.
ಹರಕೆ ತೀರಿಸಿದ ಎಸ್ಪಿ ಶುಭನ್ವಿತಾ ಹಾಗೂ ಪೊಲೀಸ್ ಅಧಿಕಾರಿಗಳು!
ಹಾಸನಾಂಬೆ ಜಾತ್ರಾ ಮಹೋತ್ಸವ ಯಾವುದೇ ಗೊಂದಲ ಹಾಗೂ ನೂಕುನುಗ್ಗಲು ಇಲ್ಲದೆ ಯಶಸ್ವಿಯಾಗಿ ನಡೆದರೆ ಎಸ್ಪಿ ಶುಭನ್ವಿತಾ ಅವರಿಂದ ಈಡುಗಾಯಿ ಒಡೆಸುವುದಾಗಿ ಶಾಂತಿಗ್ರಾಮ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಹರಕೆ ಹೊತ್ತಿದ್ದರು.
ಅದರಂತೆ ಜಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೇವಾಲಯದ ಎದುರು ಎಸ್ಪಿ ಶುಭನ್ವಿತಾ ಅವರೊಂದಿಗೆ ಡಿವೈಎಸ್‌ಪಿ, ಸಿಪಿಐಗಳು ಹಾಗೂ ಪಿಎಸ್‌ಐಗಳು ಸೇರಿ ಈಡುಗಾಯಿ ಒಡೆದು ಹರಕೆ ತೀರಿಸಿದ್ದಾರೆ.
ಇದೇ ವೇಳೆ ಹಾಸನಾಂಬೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಶ್ರಮಿಸಿದ ಎಲ್ಲರಿಗೂ ಎಸ್ಪಿ ಶುಭನ್ವಿತಾ ಧನ್ಯವಾದ ತಿಳಿಸಿದ್ದಾರೆ.
ಮುಂದಿನ ವರ್ಷ ಹಾಸನಾಂಬೆ ದರ್ಶನ ಯಾವಾಗ?
ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದ್ದು, ಮುಂದಿನ ವರ್ಷದ ದರ್ಶನೋತ್ಸವದ ದಿನಾಂಕವೂ ನಿಗದಿಯಾಗಿದೆ. ಮುಂದಿನ ವರ್ಷ ಅಕ್ಟೋಬರ್ 21ರಿಂದ ಅಕ್ಟೋಬರ್ 31ರವರೆಗೆ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.