ಅಂಗೈಯಲ್ಲಿರುವ ಜೀವನ ರೇಖೆ ವ್ಯಕ್ತಿಯ ವ್ಯಕ್ತಿತ್ವ, ಶಕ್ತಿ ಮತ್ತು ಜೀವನಶೈಲಿಯ ಬಗ್ಗೆ ಹಲವು ವಿಚಾರಗಳನ್ನು ತಿಳಿಸುತ್ತದೆ ಎಂಬ ನಂಬಿಕೆ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿದೆ. ಈ ರೇಖೆಯ ಆಕಾರ, ಆಳ ಮತ್ತು ವಿನ್ಯಾಸವನ್ನು ಆಧರಿಸಿ ವ್ಯಕ್ತಿಯ ಸ್ವಭಾವದ ಕುರಿತು ವಿವಿಧ ವ್ಯಾಖ್ಯಾನಗಳನ್ನು ಮಾಡಲಾಗುತ್ತದೆ. ಹಾಗಾದರೆ, ನಿಮ್ಮ ಅಂಗೈಯಲ್ಲಿರುವ ಜೀವನ ರೇಖೆ ಯಾವ ರೀತಿಯಲ್ಲಿದೆ? ಅದರ ಬಗ್ಗೆ ಹಸ್ತಸಾಮುದ್ರಿಕ ಶಾಸ್ತ್ರ ಏನು ಹೇಳುತ್ತದೆ?
ಜೀವನ ರೇಖೆ ಸ್ಪಷ್ಟವಾಗಿದ್ದರೆ ಏನು ಅರ್ಥ?
ಜೀವನ ರೇಖೆಯು ಹೆಬ್ಬೆರಳಿನ ಕೆಳಭಾಗದಲ್ಲಿರುವ ಶುಕ್ರ ಪರ್ವದ ಸುತ್ತಲೂ ಬಾಗಿಕೊಂಡು ಮಣಿಕಟ್ಟಿನ ಕಡೆಗೆ ಸಾಗುತ್ತದೆ. ಕೆಲವರ ಅಂಗೈಯಲ್ಲಿ ಈ ರೇಖೆ ಆಳವಾಗಿ ಮತ್ತು ಸ್ಪಷ್ಟವಾಗಿ ಕಾಣಿಸಿಕೊಂಡರೆ, ಇನ್ನು ಕೆಲವರಲ್ಲಿ ತೆಳುವಾಗಿ ಅಥವಾ ಮಸುಕಾಗಿ ಗೋಚರಿಸುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ನಂಬಿಕೆಯ ಪ್ರಕಾರ, ಜೀವನ ರೇಖೆಯು ಆಳವಾಗಿ, ಸ್ಪಷ್ಟವಾಗಿ ಮತ್ತು ದೊಡ್ಡ ಅಡ್ಡಿಗಳಿಲ್ಲದೆ ಇದ್ದರೆ, ಅದನ್ನು ಉತ್ತಮ ಚೈತನ್ಯ, ಉತ್ಸಾಹ ಹಾಗೂ ಸಕ್ರಿಯ ಸ್ವಭಾವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ರೇಖೆಯು ತೆಳುವಾಗಿ ಕಂಡುಬಂದರೆ, ವ್ಯಕ್ತಿಯ ಶಕ್ತಿಯ ಮಟ್ಟದಲ್ಲಿ ಏರಿಳಿತಗಳು ಉಂಟಾಗಬಹುದು ಎಂಬ ವ್ಯಾಖ್ಯಾನವಿದೆ.

ಜೀವನ ರೇಖೆಯ ವಕ್ರತೆ ಏನನ್ನು ಸೂಚಿಸುತ್ತದೆ?
ಜೀವನ ರೇಖೆಯು ಹೆಬ್ಬೆರಳಿನ ಬುಡದಿಂದ ಅಂಗೈಯ ಕೆಳಭಾಗದವರೆಗೆ ಹೇಗೆ ವಿಸ್ತರಿಸಿದೆ ಎಂಬುದಕ್ಕೂ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮಹತ್ವ ನೀಡಲಾಗುತ್ತದೆ. ರೇಖೆಯು ಅಗಲವಾಗಿ ಬಾಗಿಕೊಂಡಿದ್ದರೆ, ವ್ಯಕ್ತಿ ಉತ್ಸಾಹಭರಿತನಾಗಿದ್ದು, ಹೊಸ ಅನುಭವಗಳನ್ನು ಇಷ್ಟಪಡುವ ಸ್ವಭಾವ ಹೊಂದಿರುತ್ತಾನೆ ಎಂಬ ನಂಬಿಕೆಯಿದೆ.
ಇಂತಹವರು ಹೊಸ ಸ್ಥಳಗಳಿಗೆ ಪ್ರಯಾಣಿಸುವುದು, ಹೊಸ ವಿಷಯಗಳನ್ನು ಕಲಿಯುವುದು ಹಾಗೂ ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸುವುದನ್ನು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಜೀವನ ರೇಖೆಯ ವಕ್ರತೆ ಇಕ್ಕಟ್ಟಾಗಿದ್ದರೆ, ವ್ಯಕ್ತಿ ಶಾಂತ ಸ್ವಭಾವದವನಾಗಿದ್ದು, ಸಂಯಮದಿಂದ ವರ್ತಿಸುತ್ತಾನೆ ಎಂಬ ವ್ಯಾಖ್ಯಾನವಿದೆ.
ಜೀವನ ರೇಖೆಯ ಪಕ್ಕದಲ್ಲಿ ಮತ್ತೊಂದು ರೇಖೆಯಿದೆಯೇ?
ಕೆಲವರ ಅಂಗೈಯಲ್ಲಿ ಜೀವನ ರೇಖೆಯ ಒಳಭಾಗದಲ್ಲಿ ಅದಕ್ಕೆ ಸಮಾನಾಂತರವಾಗಿ ಮತ್ತೊಂದು ಸಣ್ಣ ರೇಖೆ ಕಾಣಿಸಿಕೊಳ್ಳುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಇದನ್ನು ‘ಮಂಗಳ ರೇಖೆ’ ಅಥವಾ ‘ರಕ್ಷಕ ರೇಖೆ’ ಎಂದು ಕರೆಯಲಾಗುತ್ತದೆ.
ಈ ರೇಖೆಯು ಧೈರ್ಯ, ಆತ್ಮವಿಶ್ವಾಸ ಮತ್ತು ಕಷ್ಟದ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯದ ಸಂಕೇತವೆಂದು ನಂಬಲಾಗಿದೆ. ಜೀವನದಲ್ಲಿ ಅಡೆತಡೆಗಳು ಎದುರಾದಾಗ ಇಂತಹ ರೇಖೆ ಹೊಂದಿರುವವರಿಗೆ ಹೆಚ್ಚುವರಿ ಬೆಂಬಲ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ.