ಅಕ್ಷರ ಗಾತ್ರ

‘ಬಸವಣ್ಣರಿಗೆ ಮಸಿ ಬಳಿಯುವ ಉದ್ದೇಶ ನನಗಿಲ್ಲ, ಐತಿಹಾಸಿಕ ಆಧಾರಗಳನ್ನೇ ಉಲ್ಲೇಖಿಸಿದ್ದೇನೆ’: ರವಿ ಹಂಜ್ ಸ್ಪಷ್ಟನೆ

‘ಬಸವಣ್ಣರಿಗೆ ಮಸಿ ಬಳಿಯುವ ಉದ್ದೇಶ ನನಗಿಲ್ಲ, ಐತಿಹಾಸಿಕ ಆಧಾರಗಳನ್ನೇ ಉಲ್ಲೇಖಿಸಿದ್ದೇನೆ’: ರವಿ ಹಂಜ್ ಸ್ಪಷ್ಟನೆ

ಬೆಂಗಳೂರು: ಲೇಖಕ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ರವಿ ಹಂಜ್, ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಕೃತಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೆ ಕೆಲವರು ಆರೋಪ ಮಾಡುತ್ತಿದ್ದಾರೆ. ಬೇಕಿದ್ದರೆ ಈ ವಿಚಾರವಾಗಿ ಬಹಿರಂಗ ಚರ್ಚೆ ನಡೆಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ತಮ್ಮ ಇತ್ತೀಚಿನ ಕೃತಿಯಲ್ಲಿ ಬಸವಣ್ಣನವರಿಗೆ ಮಸಿ ಬಳಿಯುವಂತಹ ಯಾವುದೇ ಉದ್ದೇಶವಿಲ್ಲ. ಆದರೆ ಕೆಲವರು ಇದನ್ನು ಬಸವಣ್ಣನವರಿಗೆ ಅವಮಾನ ಮಾಡುವ ಪ್ರಯತ್ನ ಎಂದು ಬಿಂಬಿಸುತ್ತಿದ್ದಾರೆ. ಆರೋಪ ಮಾಡುತ್ತಿರುವವರಲ್ಲಿ ಬಹುತೇಕರು ಪುಸ್ತಕವನ್ನೇ ಓದಿಲ್ಲ ಎಂದು ರವಿ ಹಂಜ್ ಹೇಳಿದ್ದಾರೆ.

ಪುಸ್ತಕ ಓದದೇ ಪ್ರತಿಭಟನೆ ಮಾಡುತ್ತಿದ್ದಾರೆ: ರವಿ ಹಂಜ್

ಕೆಲವೇ ಕೆಲವು ಜನರ ತಂತ್ರಕ್ಕೆ ಮರುಳಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ತಮಗೆ ನಗು ಬರುತ್ತಿದೆ ಎಂದು ಅವರು ಹೇಳಿದ್ದಾರೆ. ಅದೇ ರೀತಿ, ಕೆಲವರ ಕುತಂತ್ರಕ್ಕೆ ಒಳಗಾಗಿ ಸಾಕಷ್ಟು ಮುಗ್ಧರು ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ಕಂಡು ಮರುಕ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ತಮ್ಮ ತಲೆಗೆ ಫತ್ವಾ ಹೊರಡಿಸಬೇಕು ಅಥವಾ ಕೈಕಾಲು ಮುರಿಯಬೇಕು ಎಂದು ಹೇಳಿದವರ ಬಗ್ಗೆಯೂ ದ್ವೇಷವಿಲ್ಲ. ಬದಲಾಗಿ, ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವವರ ಬಗ್ಗೆ ವಿಷಾದ ಮತ್ತು ಕರುಣೆ ಇದೆ ಎಂದು ಹೇಳಿದ್ದಾರೆ.

ವಿಡಿಯೋ ತುಂಡರಿಸಿ ಹರಿಬಿಟ್ಟಿದ್ದಾರೆ ಎಂಬ ಆರೋಪ

ತಮ್ಮ ಕೃತಿಯಲ್ಲಿ ಬಸವಣ್ಣನವರ ವಚನಗಳು ಮತ್ತು ಐತಿಹಾಸಿಕ ಉಲ್ಲೇಖಗಳ ನಡುವಿನ ವೈರುಧ್ಯದ ಕುರಿತು ಚರ್ಚಿಸಲಾಗಿದೆ ಎಂದು ರವಿ ಹಂಜ್ ವಿವರಿಸಿದ್ದಾರೆ. ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನವನ್ನು ಉಲ್ಲೇಖಿಸಿರುವ ಅವರು, ಮತ್ತೊಂದೆಡೆ ಬಿಜ್ಜಳನ ಖಜಾನೆಯನ್ನು ಬಳಸಿಕೊಂಡು ಜಂಗಮರಿಗೆ ದಾಸೋಹ ಮಾಡಿದರು ಮತ್ತು ಬಿಜ್ಜಳನನ್ನು ಕೊಲ್ಲಿಸಿದರು ಎಂಬ ಆರೋಪಗಳ ಬಗ್ಗೆಯೂ ಕೃತಿಯಲ್ಲಿ ಪ್ರಸ್ತಾಪಿಸಿರುವುದಾಗಿ ತಿಳಿಸಿದ್ದಾರೆ.

ಆದರೆ ತಮ್ಮ ಹೇಳಿಕೆಗಳನ್ನು ಸಂದರ್ಭದಿಂದ ಬೇರ್ಪಡಿಸಿ, ತಮಗೆ ಬೇಕಾದ ರೀತಿಯಲ್ಲಿ ತುಂಡರಿಸಿ ವಿಡಿಯೋ ಹರಿಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ

ತಮ್ಮ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ರವಿ ಹಂಜ್ ಆರೋಪಿಸಿದ್ದಾರೆ. ಆದರೆ ತಾವು ಸತ್ಯ ಮತ್ತು ಪ್ರಾಮಾಣಿಕತೆಯ ಪರವಾಗಿದ್ದು, ಇಂತಹ ಪ್ರಯತ್ನಗಳಿಗೆ ಜಗ್ಗುವುದಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿಯೂ ಹೇಳಿದ್ದಾರೆ.

ತಮ್ಮ ಕೃತಿಯಲ್ಲಿ ಯಾವುದೇ ಅವಹೇಳನಕಾರಿ ಅಂಶಗಳಿಲ್ಲ. ‘ಬಸವರಾಜದೇವ ರಗಳೆ’, ‘ಬಸವಪುರಾಣ’ ಹಾಗೂ ಗೆಜೆಟಿಯರ್‌ಗಳಲ್ಲಿನ ಉಲ್ಲೇಖಗಳನ್ನು ಆಧಾರವಾಗಿಟ್ಟುಕೊಂಡು ಬರೆಯಲಾಗಿದೆ. ವೈಯಕ್ತಿಕವಾಗಿ ತಮ್ಮದೇ ಆದ ಯಾವುದೇ ವಿಚಾರವನ್ನು ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅರವಿಂದ ಜತ್ತಿ ವಿರುದ್ಧವೂ ಆರೋಪ

ಸಮಾಜದ ಸ್ವಾಸ್ಥ್ಯ ಹಾಳಾಗಲು ತಾವು ಕಾರಣರಲ್ಲ, ಬದಲಾಗಿ ಈ ಬೆಳವಣಿಗೆಗಳ ಹಿಂದೆ ಸರ್ಕಾರಿ ಪ್ರಾಯೋಜಿತ ಪ್ರಯತ್ನಗಳಿವೆ ಎಂದು ರವಿ ಹಂಜ್ ಆರೋಪಿಸಿದ್ದಾರೆ. ಅರವಿಂದ ಜತ್ತಿ ಸೇರಿದಂತೆ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದೂ ದೂರಿದ್ದಾರೆ.

ಇದೇ ವೇಳೆ, ತಮ್ಮ ಪುಸ್ತಕದ ಪರಿವಿಡಿಯಲ್ಲಿಯೇ ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಕೃತಿಯಲ್ಲಿರುವ ವಿಷಯಗಳನ್ನು ಓದಿ, ಅರ್ಥಮಾಡಿಕೊಂಡ ಬಳಿಕವೇ ಅದರ ಬಗ್ಗೆ ಮಾತನಾಡಬೇಕು ಎಂದು ರವಿ ಹಂಜ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

NTV ಕನ್ನಡ ಸಂಪಾದಕೀಯ ತಂಡ.