ಹುಣಸೂರು: ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತಿಯೇ ಕೊಲೆ ಮಾಡಿರುವ ಭೀಕರ ಹಾಗೂ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ನಡೆದಿದೆ.
ಸಂಸಾರದಲ್ಲಿ ಪ್ರಿಯಕರನ ಪ್ರವೇಶ, ಯೂಟ್ಯೂಬ್ ನೋಡಿ ವಿಷದ ಪ್ಲ್ಯಾನ್: ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ. ಈತನಿಗೆ ಕೆಸರೆಯ ಪವಿತ್ರಾ ಎಂಬಾಕೆಯೊಂದಿಗೆ ಮದುವೆಯಾಗಿದ್ದು, ದಂಪತಿಗೆ 11 ಹಾಗೂ 9 ವರ್ಷದ ಇಬ್ಬರು ಮಕ್ಕಳಿದ್ದಾರೆ.
ಆದರೆ, ಅದೇ ಗ್ರಾಮದ ಸುನೀಲ್ ಎಂಬಾತನ ಜೊತೆ ಪವಿತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿಯನ್ನು ತೊಲಗಿಸಲು ನಿರ್ಧರಿಸಿದ ಪವಿತ್ರಾ, ಯೂಟ್ಯೂಬ್‌ನಲ್ಲಿ (YouTube) ಮಾಹಿತಿ ಪಡೆದು ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ನೀಡಲು ಸಂಚು ರೂಪಿಸಿದ್ದಳು.
ವಿಷ ನೀಡಿದರೂ ಸಾಯದಿದ್ದಾಗ ಕತ್ತು ಹಿಸುಕಿ ಹತ್ಯೆ: ಅಕ್ಟೋಬರ್ 16ರಂದು ಕುಡಿದು ಮನೆಗೆ ಬಂದಿದ್ದ ಪತಿ ರಾಮಪ್ರಸಾದ್‌ಗೆ ಪವಿತ್ರಾ ದತ್ತೂರಿ ಬೀಜದ ಪುಡಿ ಬೆರೆಸಿದ ಇಡ್ಲಿ ತಿನ್ನಿಸಿದ್ದಳು. ಆದರೆ, ಅದರಿಂದ ರಾಮಪ್ರಸಾದ್ ಮೃತಪಡದಿದ್ದಾಗ, ಪ್ರಿಯಕರ ಸುನೀಲ್‌ನೊಂದಿಗೆ ಸೇರಿ ಆತನ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಕೊಲೆಯ ನಂತರ ಪವಿತ್ರಾ, ಪತಿಯ ಸಹೋದರ ಚಂದ್ರಹಾಸನಿಗೆ ಕರೆ ಮಾಡಿ “ಮೊಸರು ತಿಂದು ಮಲಗಿದ್ದ ಅಣ್ಣ ಎದ್ದೇಳುತ್ತಿಲ್ಲ” ಎಂದು ಕಟ್ಟುಕಥೆ ಹೇಳಿ ನಂಬಿಸಿದ್ದಳು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ರಾಮಪ್ರಸಾದ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಬಳಿಕ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಯೂ ನೆರವೇರಿತ್ತು.
ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲು: ಆದರೆ, ರಾಮಪ್ರಸಾದ್ ಸಾವಿನ ದಿನವೇ ರಾತ್ರಿ ಆರೋಪಿ ಸುನೀಲ್ ಆತನ ಮನೆಗೆ ಬಂದಿದ್ದ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿತ್ತು.
ಇದರಿಂದ ಅನುಮಾನಗೊಂಡ ರಾಮಪ್ರಸಾದ್ ಸಹೋದರ ಚಂದ್ರಹಾಸ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸತ್ಯಾಂಶಗಳು ಹೊರಬಂದಿವೆ. ಸದ್ಯ ಆರೋಪಿಗಳಾದ ಪವಿತ್ರಾ ಹಾಗೂ ಆಕೆಯ ಪ್ರಿಯಕರ ಸುನೀಲ್‌ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.