ಮೈಸೂರು: ಎಥೆನಾಲ್ ಉತ್ಪಾದನೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರಂಭವಾಗಿದ್ದಲ್ಲ. ಮೈಸೂರು ಮಹಾರಾಜರ ಕಾಲದಲ್ಲಿಯೇ ಎಥೆನಾಲ್ ಉತ್ಪಾದನೆ ನಡೆಯುತ್ತಿತ್ತು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಎಥೆನಾಲ್ ಮಿಶ್ರಣದ ವಿಚಾರವಾಗಿ ಸಚಿವ ರಿಜ್ವಾನ್ ಅರ್ಷದ್ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುರುಗೇಶ್ ನಿರಾಣಿ, ದೇಶದಲ್ಲಿ ಪ್ರಸ್ತುತ ಸುಮಾರು 500 ಎಥೆನಾಲ್ ಉತ್ಪಾದನಾ ಕೇಂದ್ರಗಳಿವೆ. ಪ್ರತಿವರ್ಷ 1,200 ಕೋಟಿ ಲೀಟರ್ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಡೀಸೆಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿಲ್ಲ
ಎಥೆನಾಲ್ ಮಿಶ್ರಣದ ಕುರಿತು ಸ್ಪಷ್ಟನೆ ನೀಡಿದ ನಿರಾಣಿ, ಡೀಸೆಲ್‌ನಲ್ಲಿ ಎಥೆನಾಲ್ ಬೆರೆಸುತ್ತಿಲ್ಲ. ಪೆಟ್ರೋಲ್‌ನಲ್ಲಿ ಮಾತ್ರ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪೆಟ್ರೋಲಿಯಂ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವ ಅಗತ್ಯವಿಲ್ಲ. ಸಚಿವ ರಿಜ್ವಾನ್ ಅರ್ಷದ್ ಯಾವ ಪೆಟ್ರೋಲಿಯಂ ಟರ್ಮಿನಲ್‌ನಿಂದ ಮಾದರಿ ಸಂಗ್ರಹಿಸಿದ್ದಾರೆ? ಮಾದರಿ ಪಡೆಯುವ ಸಂದರ್ಭದಲ್ಲಿ ಯಾವ ಅಧಿಕಾರಿಗಳು ಉಪಸ್ಥಿತರಿದ್ದರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಅಲ್ಲದೆ, ಎಥೆನಾಲ್ ಮಿಶ್ರಿತ ಪೆಟ್ರೋಲ್‌ನ ಮಾದರಿಗಳ ಪರೀಕ್ಷೆಗಾಗಿ ಸಚಿವ ರಿಜ್ವಾನ್ ಅರ್ಷದ್ ಸಮಿತಿಯೊಂದನ್ನು ರಚಿಸಲಿ ಎಂದು ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಅವರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಎಥೆನಾಲ್ ಮಿಶ್ರಣದಿಂದ ಮೈಲೇಜ್ ಕಡಿಮೆಯಾಗುತ್ತದೆ ಎಂದ ನಿರಾಣಿ
ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಶೇ.4ರಿಂದ 5ರಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದು ನಿರಾಣಿ ಹೇಳಿದ್ದಾರೆ. ಆದರೆ, ಎಥೆನಾಲ್ ಮಿಶ್ರಣದಿಂದ ಪೆಟ್ರೋಲ್ ಬಂಕ್‌ಗಳು ಅಥವಾ ಪೆಟ್ರೋಲಿಯಂ ಟರ್ಮಿನಲ್‌ಗಳಿಗೆ ಯಾವುದೇ ಹೆಚ್ಚುವರಿ ಲಾಭವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನಿರಾಣಿ ಹೇಳಿದ್ದೇನು?
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ, ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ತಾನಲ್ಲ ಎಂದು ಹೇಳಿದ್ದಾರೆ.
ಹೈಕಮಾಂಡ್ ಜವಾಬ್ದಾರಿ ನೀಡಿದರೆ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಪ್ರಸ್ತುತ ವಿಜಯೇಂದ್ರ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೈಕಮಾಂಡ್ ಅವರನ್ನೇ ಮುಂದುವರಿಸಬಹುದು ಅಥವಾ ಬದಲಾವಣೆ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.