ಕಲಬುರಗಿ: ವಿದ್ಯಾಭ್ಯಾಸದ ಉದ್ದೇಶದಿಂದ ಹಾಸ್ಟೆಲ್‌ಗೆ ಬಂದಿದ್ದ ವಿದ್ಯಾರ್ಥಿಯೇ ಸಹವಿದ್ಯಾರ್ಥಿಗಳ ಕಿರುಕುಳಕ್ಕೆ ಒಳಗಾಗಿರುವ ಆರೋಪ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.
ಮದ್ಯ ತಂದುಕೊಡುವಂತೆ ಹಾಗೂ ₹30 ಸಾವಿರ ಹಣ ನೀಡುವಂತೆ ಒತ್ತಾಯಿಸಿ, ಹಣ ಕೊಡದಿದ್ದಾಗ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಈ ಘಟನೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಚಿತ್ತಾಪುರದ ಸುಮಿತ್ ಎಂದು ಗುರುತಿಸಲಾಗಿದೆ. ಈತ ಹೆಚ್‌ಕೆಎಸ್ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಕಲಬುರಗಿಯ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾನೆ.
ಅಕ್ಟೋಬರ್ 29ರಂದು ಹಾಸ್ಟೆಲ್‌ಗೆ ಬಂದಿದ್ದ ಸುಮಿತ್‌ಗೆ ಕೆಲವರು ಆರಂಭದಿಂದಲೇ ತೊಂದರೆ ನೀಡುತ್ತಿದ್ದರು ಎನ್ನಲಾಗಿದೆ. ರೋಷನ್, ಶರಣು, ಲಕ್ಷ್ಮಣ್, ರಾಜಕುಮಾರ ಸೇರಿದಂತೆ ಕೆಲವರು ಕೊಠಡಿಯಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸುಮಿತ್‌ಗೆ ಮದ್ಯ ತಂದುಕೊಡುವಂತೆ ಸೂಚಿಸಿದ್ದಲ್ಲದೆ, ₹30 ಸಾವಿರ ಹಣ ನೀಡುವಂತೆಯೂ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಆದರೆ, ಹಣ ನೀಡಲು ನಿರಾಕರಿಸಿದ ಸುಮಿತ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿದ್ದಾನೆ. ಹಾಸ್ಟೆಲ್‌ನ ಕೊಠಡಿಗಳಲ್ಲಿ ಮದ್ಯದ ಬಾಟಲಿಗಳು, ಗುಟ್ಕಾ ಮತ್ತು ಸಿಗರೇಟ್ ಪ್ಯಾಕೆಟ್‌ಗಳು ಬಿದ್ದಿರುವ ದೃಶ್ಯಗಳು ಕೂಡ ಕಂಡುಬಂದಿವೆ. ವಿದ್ಯಾರ್ಥಿಯ ಮೈಮೇಲೆ ಹಲ್ಲೆಯ ಗಾಯದ ಗುರುತುಗಳೂ ಕಾಣಿಸಿಕೊಂಡಿವೆ.
ಮಗನ ನೋವಿನ ಸ್ಥಿತಿ ಕಂಡು ತಾಯಿ ಕಣ್ಣೀರು
ತನ್ನ ಮೇಲೆ ಹಲ್ಲೆ ನಡೆದಿರುವ ವಿಚಾರವನ್ನು ಸುಮಿತ್ ತಾಯಿಗೆ ಕರೆ ಮಾಡಿ ತಿಳಿಸಿದ್ದಾನೆ. ವಿಷಯ ತಿಳಿದು ಹಾಸ್ಟೆಲ್‌ಗೆ ಧಾವಿಸಿದ ತಾಯಿ ಸುಭದ್ರಮ್ಮ, ಮಗನ ಗಾಯದ ಗುರುತುಗಳನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಈ ಸಂದರ್ಭದಲ್ಲಿ ವಾರ್ಡನ್ ಕೂಡ ಸರಿಯಾಗಿ ಸ್ಪಂದಿಸದೆ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ ರೋಷನ್, ಶರಣು, ಲಕ್ಷ್ಮಣ್, ರಾಜಕುಮಾರ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಮಾತ್ರವಲ್ಲದೆ, ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾದ ವಾರ್ಡನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಸುಭದ್ರಮ್ಮ ಒತ್ತಾಯಿಸಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರ ಕಾರ್ಯಾಚರಣೆ
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿರುವ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿರುವ ಹಿಂದಿನ ಕಾರಣ ಹಾಗೂ ಘಟನೆಯ ಇತರ ಆಯಾಮಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.