ಬೆಂಗಳೂರು: ಸಂಬಂಧದಲ್ಲಿ ತಮ್ಮನಾಗಬೇಕಾದವನ ಜೊತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಲ್ಲದೆ, ಆತನಿಂದ ಎದುರಾದ ತೀವ್ರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆಟೋ ಚಾಲಕನೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ ಏನು? ಆನೇಕಲ್ನ ನೆರಿಗಾ ಗ್ರಾಮದ ನಿವಾಸಿ, ಆಟೋ ಚಾಲಕ ಮುನಿಕೃಷ್ಣ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ. 10 ವರ್ಷಗಳ ಹಿಂದೆ ನಯನ ಎಂಬುವವರ ಜೊತೆ ಮುನಿಕೃಷ್ಣ ಅವರ ಮದುವೆಯಾಗಿದ್ದು, ದಂಪತಿಗೆ 6 ವರ್ಷದ ಮಗನಿದ್ದಾನೆ. ಪ್ರಸ್ತುತ ನಯನ ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ನಡೆಯುತ್ತಿದ್ದಾಗ, ಮುನಿಕೃಷ್ಣನ ಸಂಬಂಧಿ ಹಾಗೂ ಕ್ಯಾಬ್ ಚಾಲಕನಾಗಿದ್ದ ಕುಮಾರ ಎಂಬಾತ ನಯನಾಳನ್ನು ಕಾರಿನಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಬರುವ ನೆಪದಲ್ಲಿ ಆಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದನು.
ಅಸಭ್ಯ ವಿಡಿಯೋ ಕಳುಹಿಸಿ ಕಿರುಕುಳ: ಕಳೆದ ಮೂರು ತಿಂಗಳ ಹಿಂದೆ ನಯನ ಹಾಗೂ ಕುಮಾರನ ಅನೈತಿಕ ಸಂಬಂಧದ ವಿಷಯ ಬಯಲಾಗಿತ್ತು. ಮುನಿಕೃಷ್ಣ ಅವರಿಗೆ ವಾಟ್ಸಾಪ್ನಲ್ಲಿ ತಾವಿಬ್ಬರೂ ಜೊತೆಗಿದ್ದ ಫೋಟೋಗಳು, ಅಸಭ್ಯ ವಿಡಿಯೋಗಳು ಹಾಗೂ ವಾಟ್ಸಾಪ್ ಚಾಟ್ಗಳನ್ನು ಕಳುಹಿಸಿದ್ದ ಕುಮಾರ, ತೀವ್ರ ಟಾರ್ಚರ್ ನೀಡಲು ಆರಂಭಿಸಿದ್ದನು. ರಸ್ತೆಯಲ್ಲಿ ಸಿಕ್ಕಾಗಲೆಲ್ಲಾ ಸುಮ್ಮನೆ ನಿಂದಿಸುತ್ತಿದ್ದ ಕುಮಾರ, “ನಯನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು” ಎಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನು. ಈ ವಿಚಾರದಿಂದ ತೀವ್ರ ಮನನೊಂದಿದ್ದ ಮುನಿಕೃಷ್ಣ, ಸಾಯುವುದಕ್ಕೂ ಒಂದು ದಿನ ಮುನ್ನ ತನ್ನ ಸಹೋದರನಿಗೆ ಈ ಎಲ್ಲಾ ವಿಷಯಗಳನ್ನು ತಿಳಿಸಿದ್ದರು.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು: ಅದಾದ ಮರುದಿನವೇ ಮುನಿಕೃಷ್ಣ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರಂಭದಲ್ಲಿ ಕೌಟುಂಬಿಕ ಕಲಹದಿಂದ ಸಾವು ಸಂಭವಿಸಿರಬಹುದು ಎಂದು ಭಾವಿಸಿದ್ದ ಕುಟುಂಬಸ್ಥರಿಗೆ, ಅಂತ್ಯಕ್ರಿಯೆಯ ಬಳಿಕ ಮುನಿಕೃಷ್ಣ ಅವರ ಸಹೋದರ ನಿಜಸಂಗತಿಯನ್ನು ತಿಳಿಸಿದಾಗ ಅನೈತಿಕ ಸಂಬಂಧ ಹಾಗೂ ಕಿರುಕುಳದ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಯನ ಹಾಗೂ ಕುಮಾರನ ಅನೈತಿಕ ಸಂಬಂಧ ಮತ್ತು ಕಿರುಕುಳವೇ ಮುನಿಕೃಷ್ಣ ಅವರ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಾಗಿದ್ದರೂ ಪೊಲೀಸರು ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ಸಾವಿಗೆ ಕಾರಣರಾದ ನಯನ ಹಾಗೂ ಕುಮಾರನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.