ಮುಂಬೈ: ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಮತ್ತೊಂದು ಅಪರೂಪದ ಜಾಗತಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ಖ್ಯಾತ ಮನರಂಜನಾ ಮಾಧ್ಯಮ ಸಂಸ್ಥೆ ‘ವೆರೈಟಿ’ ಪ್ರಕಟಿಸಿರುವ ಸಾರ್ವಕಾಲಿಕ 100 ಶ್ರೇಷ್ಠ ಸಿನಿಮಾ ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ 92ನೇ ಸ್ಥಾನ ಪಡೆದಿದ್ದಾರೆ. ಅವರ ಅತ್ಯುತ್ತಮ ಸಿನಿಮಾವಾಗಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ದೇವದಾಸ್’ ಚಿತ್ರವನ್ನು ಗುರುತಿಸಲಾಗಿದೆ.
ಈ ಪ್ರತಿಷ್ಠಿತ ಪಟ್ಟಿಯಲ್ಲಿ ಮರ್ಲಿನ್ ಮನ್ರೋ ಮೊದಲ ಸ್ಥಾನದಲ್ಲಿದ್ದರೆ, ಹಂಫ್ರಿ ಬೊಗಾರ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಚಾರ್ಲಿ ಚಾಪ್ಲಿನ್ ಮೂರನೇ, ಜ್ಯಾಕ್ ನಿಕಲ್ಸನ್ ನಾಲ್ಕನೇ ಹಾಗೂ ಕ್ಯಾಥರೀನ್ ಹೆಪ್ಬರ್ನ್ ಐದನೇ ಸ್ಥಾನ ಪಡೆದಿದ್ದಾರೆ. ಸಿಡ್ನಿ ಪೊಯಿಟಿಯರ್ ಆರನೇ, ಮರ್ಲಾನ್ ಬ್ರಾಂಡೋ ಏಳನೇ, ಟಾಮ್ ಕ್ರೂಸ್ ಎಂಟನೇ, ಟೊಶಿರೊ ಮಿಫುನೆ ಒಂಬತ್ತನೇ ಹಾಗೂ ಬಾರ್ಬ್ರಾ ಸ್ಟ್ರೈಸಂಡ್ ಹತ್ತನೇ ಸ್ಥಾನದಲ್ಲಿದ್ದಾರೆ.
ಇತರ ಪ್ರಮುಖ ತಾರೆಯರ ಪೈಕಿ ಜೂಲಿಯಾ ರಾಬರ್ಟ್ಸ್ 13ನೇ, ಆಡ್ರೆ ಹೆಪ್ಬರ್ನ್ 26ನೇ, ರಾಬರ್ಟ್ ಡೌನಿ ಜೂನಿಯರ್ 74ನೇ, ರಯಾನ್ ಗೋಸ್ಲಿಂಗ್ 77ನೇ, ರಾಬರ್ಟ್ ಪ್ಯಾಟಿನ್ಸನ್ 83ನೇ ಹಾಗೂ ಟಿಮೋಥೀ ಚಲಮೆಟ್ 86ನೇ ಸ್ಥಾನ ಪಡೆದಿದ್ದಾರೆ. ಎಮ್ಮಾ ಸ್ಟೋನ್ 94ನೇ ಮತ್ತು ಝೆಂಡಯಾ 98ನೇ ಸ್ಥಾನದಲ್ಲಿದ್ದಾರೆ.
ಶಾರುಖ್ ಖಾನ್ ಅವರ ಸಿನಿಮಾ ಪಯಣ 1980ರ ದಶಕದ ಕೊನೆಯಲ್ಲಿ ಕಿರುತೆರೆಯಿಂದ ಆರಂಭವಾಯಿತು. ಬಳಿಕ ‘ದೀವಾನಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ ಅವರು, 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

2018ರಿಂದ 2022ರವರೆಗೆ ಅವರ ವೃತ್ತಿಜೀವನದಲ್ಲಿ ಹಿನ್ನಡೆ ಕಂಡುಬಂದಿತ್ತು. ಆದರೆ, 2023ರಲ್ಲಿ ಬಿಡುಗಡೆಯಾದ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳ ಮೂಲಕ ಅವರು ಮತ್ತೆ ಭರ್ಜರಿ ಯಶಸ್ಸಿನ ಹಾದಿಗೆ ಮರಳಿದರು.
ಮುಂದೆ ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 24ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ಚಿತ್ರದ ಮೂಲಕ ಅವರ ಪುತ್ರಿ ಸುಹಾನಾ ಖಾನ್ ದೊಡ್ಡ ಪರದೆಗೆ ಪ್ರವೇಶಿಸಲಿದ್ದಾರೆ.
ಈ ಹಿಂದೆ ‘ಟೈಮ್’ ಮತ್ತು ‘ನ್ಯೂಸ್‌ವೀಕ್’ ನಿಯತಕಾಲಿಕೆಗಳ ಪ್ರಭಾವಿ ವ್ಯಕ್ತಿಗಳ ಪಟ್ಟಿಗಳಲ್ಲೂ ಶಾರುಖ್ ಖಾನ್ ಸ್ಥಾನ ಪಡೆದಿದ್ದರು. ಇದೀಗ ‘ವೆರೈಟಿ’ಯ ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.