ತುಮಕೂರು: ದಸರಾ ಮಹೋತ್ಸವದ ಸಂಭ್ರಮದ ನಡುವೆಯೇ ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ ಅವರಿಗೆ ಅಭಿಮಾನಿಯೊಬ್ಬನಿಂದ ಕಿರಿಕಿರಿ ಉಂಟಾದ ಘಟನೆ ತುಮಕೂರಿನಲ್ಲಿ ನಡೆದಿದೆ. ದಸರಾ ಕಾರ್ಯಕ್ರಮದಲ್ಲಿ ರ್ಯಾಂಪ್ ವಾಕ್ ಮಾಡುತ್ತಿದ್ದ ನಟಿಯ ಬಳಿ ಏಕಾಏಕಿ ಬಂದ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅವರ ಹೆಗಲ ಮೇಲೆ ಕೈಹಾಕಿ ಎಳೆದಾಡಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಆತನನ್ನು ಹಿಡಿದಿದ್ದಾರೆ.
ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 19ರ ರಾತ್ರಿ ದಸರಾ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಟಿ ರಚಿತಾ ರಾಮ್ ಅತಿಥಿಯಾಗಿ ಆಗಮಿಸಿದ್ದರು. ನಟಿಯನ್ನು ನೋಡಲು ಹಾಗೂ ಅವರೊಂದಿಗೆ ಫೋಟೊ ತೆಗೆದುಕೊಳ್ಳಲು ಅಭಿಮಾನಿಗಳು ಉತ್ಸಾಹ ತೋರಿದ್ದರು.
ಕಾರ್ಯಕ್ರಮದ ವೇಳೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜಾ ಅವರೊಂದಿಗೆ ರಚಿತಾ ರಾಮ್ ರ್ಯಾಂಪ್ ವಾಕ್ ಮಾಡುತ್ತಿದ್ದರು. ಅಭಿಮಾನಿಗಳ ನಡುವೆ ನಿರ್ಮಿಸಲಾಗಿದ್ದ ವಿಶೇಷ ರ್ಯಾಂಪ್ ವಾಕ್ ಟ್ರ್ಯಾಕ್ನಲ್ಲಿ ನಟಿ ಹೆಜ್ಜೆ ಹಾಕುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ರಚಿತಾ ರಾಮ್ ಅಭಿಮಾನಿಗಳತ್ತ ಕೈಬೀಸುತ್ತಾ ಮುಂದೆ ಸಾಗುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಏಕಾಏಕಿ ರ್ಯಾಂಪ್ ಮೇಲೆ ನುಗ್ಗಿದ್ದಾನೆ. ಬಳಿಕ ನಟಿಯ ಸಮೀಪ ಬಂದು ಅವರ ಹೆಗಲ ಮೇಲೆ ಕೈಹಾಕಿ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ನಟಿಯನ್ನು ತನ್ನತ್ತ ಎಳೆದಾಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ವ್ಯಕ್ತಿಯ ವರ್ತನೆಯನ್ನು ಗಮನಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ಹಿಡಿದು ನಟಿಯಿಂದ ದೂರ ಕರೆದೊಯ್ದಿದ್ದಾರೆ. ಪೊಲೀಸರ ತ್ವರಿತ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.