ಅಕ್ಷರ ಗಾತ್ರ

ಜೈಲಿನಿಂದ ಕೈದಿಗಳು ಪರಾರಿ ಪ್ರಕರಣ: ಹಿರಿಯ ಜೈಲಾಧಿಕಾರಿ ಅಮಾನತು, ಸಿಬ್ಬಂದಿ ವರ್ಗಾವಣೆಗೆ ತಮಿಳುನಾಡು CM ಆದೇಶ!

Chennai ಕಚೇರಿಯಲ್ಲಿ 15 ದಿನಗಳ ಪಿತೃತ್ವ ರಜೆ ಘೋಷಿಸಿದ Tamil Nadu CM Joseph Vijay
ತಮಿಳುನಾಡು ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ ಸಿಎಂ ಸಿ. ಜೋಸೆಫ್ ವಿಜಯ್.

ಚೆನ್ನೈ: ತಮಿಳುನಾಡಿನ ಥೇಣಿ ಜಿಲ್ಲೆಯ ಉಪಜೈಲಿನಿಂದ 17 ವಿಚಾರಣಾಧೀನ ಖೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ಹಾಗೂ ಭದ್ರತಾ ಲೋಪದ ಆರೋಪದ ಹಿನ್ನೆಲೆಯಲ್ಲಿ ಉಪಜೈಲಿನ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದ ಉಪ ಜೈಲರ್ ಎನ್. ನಾಗೇಶ್ವರನ್ ಅವರನ್ನು ಅಮಾನತುಗೊಳಿಸಲಾಗಿದೆ. ಮತ್ತೊಂದೆಡೆ, ಪರಾರಿಯಾಗಿದ್ದ ಎಲ್ಲಾ 17 ಖೈದಿಗಳನ್ನು ಪೊಲೀಸರು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 26ರಂದು ಥೇಣಿ ಜಿಲ್ಲೆಯ ಉಪಜೈಲಿನಲ್ಲಿ ಈ ಘಟನೆ ನಡೆದಿತ್ತು. ಜೈಲಿನಲ್ಲಿದ್ದ 17 ವಿಚಾರಣಾಧೀನ ಖೈದಿಗಳು ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ನಾಟಕವಾಡಿ, ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಘಟನೆ ತಮಿಳುನಾಡಿನ ಜೈಲು ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಖೈದಿಗಳು ಪರಾರಿಯಾದ ಮಾಹಿತಿ ತಿಳಿಯುತ್ತಿದ್ದಂತೆಯೇ ತಮಿಳುನಾಡು ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಜೈಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಗಿದ್ದು, ಡ್ರೋನ್‌ಗಳ ಸಹಾಯದಿಂದ ಪೊದೆಗಳಲ್ಲಿ ಅಡಗಿಕೊಂಡಿದ್ದ ಎಂಟು ಖೈದಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು. ಬಳಿಕ ಉಳಿದ ಖೈದಿಗಳನ್ನೂ ಬಂಧಿಸಲಾಗಿದ್ದು, ಪರಾರಿಯಾಗಿದ್ದ ಎಲ್ಲಾ 17 ಮಂದಿ ಮತ್ತೆ ಪೊಲೀಸರ ವಶಕ್ಕೆ ಬಂದಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜೈಲು ಇಲಾಖೆ, ಭದ್ರತಾ ವ್ಯವಸ್ಥೆಯಲ್ಲಿ ಲೋಪ ಉಂಟಾಗಿರುವುದು ಹಾಗೂ ಖೈದಿಗಳ ಮೇಲೆ ಸೂಕ್ತ ನಿಗಾ ವಹಿಸದಿರುವ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಥೇಣಿ ಜಿಲ್ಲಾ ಉಪಜೈಲಿನ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದ ಉಪ ಜೈಲರ್ ಎನ್. ನಾಗೇಶ್ವರನ್ ಅವರನ್ನು ಅಕ್ಟೋಬರ್ 30ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಎನ್. ನಾಗೇಶ್ವರನ್ ಅವರು 2024ರ ಆಗಸ್ಟ್ 6ರಿಂದ ಹೆಚ್ಚುವರಿ ಪ್ರಭಾರದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಖೈದಿಗಳ ಚಲನವಲನ ಹಾಗೂ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡು ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೂ ಅಮಾನತು ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಜೈಲು ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳ ವರ್ಗಾವಣೆಗೂ ಸರ್ಕಾರ ಮುಂದಾಗಿದೆ. ಮಧುರೈ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್. ಕೃಷ್ಣರಾಜ್ ಅವರನ್ನು ಸೇಲಂ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

ಇದೇ ವೇಳೆ ಜೈಲು ಇಲಾಖೆಯ ಉನ್ನತ ಮಟ್ಟದಲ್ಲಿಯೂ ಬದಲಾವಣೆ ಮಾಡಲಾಗಿದೆ. ಜೈಲುಗಳ ಪೊಲೀಸ್ ಮಹಾನಿರ್ದೇಶಕ ಸಂದೀಪ್ ರೈ ರಾಥೋಡ್ ಅವರನ್ನು ಟ್ಯಾಂಜೆಡ್ಕೊ ಸಂಸ್ಥೆಯ ಮುಖ್ಯ ಜಾಗೃತ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕೆ. ಶಂಕರ್ ಅವರನ್ನು ಜೈಲು ಮತ್ತು ಸುಧಾರಣಾ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಜೈಲು ಭದ್ರತೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂಬ ಸೂಚನೆ ನೀಡಲಾಗಿದ್ದು, ಅಧಿಕಾರಿಗಳು ಖೈದಿಗಳ ಚಲನವಲನ ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜೈಲು ಇಲಾಖೆ ಮುಂದಾಗಿದೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಾರರು (National & International Reporter)

NTV ಕನ್ನಡ ಸಂಪಾದಕೀಯ ತಂಡ.