ಅಕ್ಷರ ಗಾತ್ರ

7 ಮಂದಿಯ ಕೊ*ಲೆ ಕೇಸ್ʼನಲ್ಲಿ ಪೊಲೀಸರಿಗೆ ಹೊಸ ತಲೆನೋವು: ಅಪ್ರಾಪ್ತೆಯಾಗಿದ್ದ ಆರೋಪಿ ಮಗಳು ಈಗ ಮೇಜರ್!

Bengaluru ಕೊಲೆ ಪ್ರಕರಣದಲ್ಲಿ ಮೃತ ಕುಟುಂಬಸ್ಥರ ಚಿತ್ರ ಮತ್ತು ಆರೋಪಿ Indrashekhar

ಬೆಂಗಳೂರು: ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ರಾಜಾಜಿನಗರದ ಏಳು ಕೊಲೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಹೊಸ ವಿಚಾರ ಬೆಳಕಿಗೆ ಬರುತ್ತಿದೆ. ಇತ್ತೀಚೆಗಷ್ಟೇ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋವೊಂದು ವೈರಲ್ ಆಗಿ ಸಂಚಲನ ಮೂಡಿಸಿತ್ತು.

ಇದೀಗ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಇಂದುಶೇಖರ್ ಪುತ್ರಿಯ ವಯಸ್ಸಿನ ವಿಚಾರ ಪೊಲೀಸರಿಗೆ ಹೊಸ ಕಾನೂನು ಸವಾಲಾಗಿ ಪರಿಣಮಿಸಿದೆ. ಕೊಲೆಗಳು ನಡೆದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ಬಾಲಕಿಗೆ ಇತ್ತೀಚೆಗಷ್ಟೇ 18 ವರ್ಷ ತುಂಬಿದ್ದು, ಆಕೆಯ ವಿರುದ್ಧ ಯಾವ ರೀತಿಯ ಕಾನೂನು ಪ್ರಕ್ರಿಯೆ ಅನುಸರಿಸಬೇಕು ಎಂಬ ಬಗ್ಗೆ ಪೊಲೀಸರು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ.

ರಾಜಾಜಿನಗರದ ಏಳು ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್ ಪುತ್ರಿ, ಕೊಲೆಗಳು ನಡೆದ ಸಂದರ್ಭದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದಳು. ಆದರೆ ಇದೀಗ ಆಕೆ ಪ್ರಾಪ್ತ ವಯಸ್ಸಿಗೆ ಕಾಲಿಟ್ಟಿದ್ದಾಳೆ. ಹೀಗಾಗಿ ಅಪರಾಧ ನಡೆದಾಗಿನ ವಯಸ್ಸಿನ ಆಧಾರದಲ್ಲಿ ಆಕೆಯನ್ನು ಬಾಲ ನ್ಯಾಯ ವ್ಯವಸ್ಥೆಯಡಿ ಪರಿಗಣಿಸಬೇಕಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕೊಲೆ ನಡೆದಾಗ ಅಪ್ರಾಪ್ತೆ, ಈಗ 18 ವರ್ಷ; ಮುಂದೇನು?

ಪ್ರಕರಣದಲ್ಲಿ ಬಾಲಕಿಯ ಪಾತ್ರದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಆಕೆಯ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಪರಾಧ ನಡೆದ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ವ್ಯಕ್ತಿಗೆ ನಂತರ 18 ವರ್ಷ ತುಂಬಿದರೆ ಯಾವ ಕಾನೂನು ಪ್ರಕ್ರಿಯೆ ಅನ್ವಯವಾಗುತ್ತದೆ ಎಂಬ ಬಗ್ಗೆ ಹಿಂದಿನ ನ್ಯಾಯಾಲಯದ ತೀರ್ಪುಗಳನ್ನೂ ಅಧ್ಯಯನ ಮಾಡುತ್ತಿದ್ದಾರೆ.

ಬಾಲ ನ್ಯಾಯ ಕಾಯ್ದೆಯ ಪ್ರಕಾರ, 16ರಿಂದ 18 ವರ್ಷದೊಳಗಿನ ಮಕ್ಕಳು ಗಂಭೀರ ಸ್ವರೂಪದ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿದಾಗ, ಅವರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಮತ್ತು ಅಪರಾಧದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಕುರಿತು ಪ್ರಾಥಮಿಕ ಮೌಲ್ಯಮಾಪನ ನಡೆಸಲು ಅವಕಾಶವಿದೆ.

ಈ ಮೌಲ್ಯಮಾಪನದ ಆಧಾರದಲ್ಲಿ ಬಾಲ ನ್ಯಾಯ ಮಂಡಳಿಯು ಪ್ರಕರಣವನ್ನು ಮಕ್ಕಳ ನ್ಯಾಯಾಲಯಕ್ಕೆ ವರ್ಗಾಯಿಸುವ ಕುರಿತು ನಿರ್ಧಾರ ಕೈಗೊಳ್ಳಬಹುದು. ಆದರೆ ವಯಸ್ಕರಂತೆ ವಿಚಾರಣೆ ನಡೆಸಬೇಕೇ ಎಂಬುದು ಕಾನೂನುಬದ್ಧ ಪರಿಶೀಲನೆ ಹಾಗೂ ನ್ಯಾಯಾಂಗ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ.

ಮೃತದೇಹಗಳನ್ನು ಪ್ಯಾಕ್ ಮಾಡಲು ಬಾಲಕಿ ಸಹಾಯ ಮಾಡಿದ್ದಳಾ?

ಪೊಲೀಸರ ತನಿಖೆಯಲ್ಲಿ ಬಾಲಕಿಯ ಪಾತ್ರದ ಕುರಿತು ಮತ್ತಷ್ಟು ಗಂಭೀರ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಸಂಬಂಧಿಕರನ್ನು ಮನೆಗೆ ಕರೆಸಿಕೊಳ್ಳಲು ಬಾಲಕಿ ನೆರವಾಗಿದ್ದಳು ಎಂಬ ಮಾಹಿತಿ ತನಿಖೆಯಲ್ಲಿ ಕೇಳಿಬಂದಿದೆ.

ಇಷ್ಟೇ ಅಲ್ಲದೆ, ಕೊಲೆಯಾದವರ ಮೃತದೇಹಗಳನ್ನು ಪ್ಯಾಕ್ ಮಾಡಲು ಹಾಗೂ ಅವುಗಳನ್ನು ಸಾಗಿಸುವ ಕಾರ್ಯದಲ್ಲಿಯೂ ಬಾಲಕಿ ಸಹಾಯ ಮಾಡಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮಾಂಸದ ಊಟ ತಯಾರಿಸುವಲ್ಲಿಯೂ ಆಕೆಯ ಪಾತ್ರವಿತ್ತು ಎನ್ನಲಾಗಿದೆ.

ಆದರೆ ಆರೋಪಿ ಇಂದುಶೇಖರ್ ತನ್ನ ಮಗಳನ್ನು ದಾರಿ ತಪ್ಪಿಸಿದ್ದಾನೆ ಎಂಬ ವಿಚಾರವೂ ತನಿಖೆಯಲ್ಲಿ ಪ್ರಸ್ತಾಪವಾಗಿದೆ. ಹೀಗಾಗಿ ಬಾಲಕಿ ಸ್ವಯಂಪ್ರೇರಿತವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಳೇ ಅಥವಾ ತಂದೆಯ ಪ್ರಭಾವಕ್ಕೆ ಒಳಗಾಗಿದ್ದಳೇ ಎಂಬ ಅಂಶವೂ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಕಾನೂನು ತಜ್ಞರ ಮೊರೆ ಹೋದ ಪೊಲೀಸರು!

ಪ್ರಕರಣದಲ್ಲಿ ಬಾಲಕಿಯ ಪಾತ್ರದ ಕುರಿತು ತನಿಖೆ ಮುಂದುವರಿಸಿರುವ ಪೊಲೀಸರು, ಆಕೆಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುತ್ತಿದ್ದಾರೆ. ಹಿಂದಿನ ನ್ಯಾಯಾಲಯದ ತೀರ್ಪುಗಳು ಹಾಗೂ ಬಾಲ ನ್ಯಾಯ ಕಾಯ್ದೆಯ ನಿಯಮಗಳನ್ನು ಪರಿಶೀಲಿಸಲಾಗುತ್ತಿದೆ.

ಸದ್ಯ ಬಾಲಕಿ ಬಾಲಮಂದಿರದಲ್ಲಿದ್ದು, ಪ್ರಮುಖ ಆರೋಪಿ ಇಂದುಶೇಖರ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆತನ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಲೈವ್

NTV ಕನ್ನಡ 24×7 ಸುದ್ದಿ

ಪೂರ್ಣವಾಗಿ ವೀಕ್ಷಿಸಿ
ಬರಹ

ಮೆಟ್ರೋ ಮತ್ತು ನಗರ ವರದಿಗಾರರು (City & Metro Reporter)

NTV ಕನ್ನಡ ಸಂಪಾದಕೀಯ ತಂಡ.