ಶಸ್ತ್ರಚಿಕಿತ್ಸೆ ವೇಳೆ ನಡೆದಿದ್ದೇನು?
ಶಯನ್ ಎಂಬ ಒಂದೂವರೆ ವರ್ಷದ ಮಗುವಿನ ಕಿವಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಸೆಪ್ಟೆಂಬರ್ 26ರಂದು ನಾಗರಭಾವಿಯ ಕ್ಲೌಡ್ 9 ಆಸ್ಪತ್ರೆಗೆ ದಾಖಲಿಸಿದ್ದರು. ಕಿವಿಯ ಗಾಯಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅರಿವಳಿಕೆ ನೀಡಿದ ಬಳಿಕ ಮಗುವಿನ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ.
ತಜ್ಞರ ವರದಿಯ ಪ್ರಕಾರ, ಮಗುವಿಗೆ ಲರಿಂಗೋಸ್ಪಾಸಂ ಉಂಟಾಗಿ ಆಮ್ಲಜನಕದ ಮಟ್ಟ ಕುಸಿದಿದೆ. ಬಳಿಕ ಸುಮಾರು ಏಳು ನಿಮಿಷಗಳ ಕಾಲ ಹೃದಯ ಸ್ತಂಭನ ಸಂಭವಿಸಿದ್ದು, ಸಿಪಿಆರ್ ಮೂಲಕ ಮಗುವಿಗೆ ಪುನಶ್ಚೇತನ ನೀಡಲಾಗಿದೆ. ನಂತರ ವೆಂಟಿಲೇಟರ್ ಹಾಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಜಯನಗರದ ಕ್ಲೌಡ್ 9 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ವೈದ್ಯರ ವಿರುದ್ಧ ಪೋಷಕರ ಗಂಭೀರ ಆರೋಪ
ಮಗುವಿನ ತಾಯಿ ಮೋನಿಕಾ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆದು ತಿಂಗಳು ಕಳೆದರೂ ಮಗು ಚೇತರಿಸಿಕೊಂಡಿಲ್ಲ. ಈಗಲೂ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಚಿಕಿತ್ಸೆಗೆ ಈಗಾಗಲೇ 3.5 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅರಿವಳಿಕೆ ನೀಡುವ ವಿಚಾರದಲ್ಲಿ ವೈದ್ಯರು ತಮ್ಮ ಮನವಿಯನ್ನು ಪರಿಗಣಿಸಿಲ್ಲ. ಮಗು ಕುಡಿದ ಹಾಲು ಶ್ವಾಸಕೋಶಕ್ಕೆ ಹೋಗಿದ್ದರಿಂದ ಹೃದಯ ಸ್ತಂಭನ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಮೆದುಳಿಗೂ ಹಾನಿಯಾಗಿರುವುದಾಗಿ ಹೇಳಲಾಗುತ್ತಿದೆ. ಮಗುವಿನ ಚಿಕಿತ್ಸೆಯಲ್ಲಿ ಗಂಭೀರ ಲೋಪವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆ ಮುಂಭಾಗ ಪೋಷಕರ ಪ್ರತಿಭಟನೆ
ಮಗುವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪೋಷಕರು ನಾಗರಭಾವಿಯ ಕ್ಲೌಡ್ 9 ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಮುಂಭಾಗ ಹಾಗೂ ಒಳಭಾಗದಲ್ಲಿ ಬ್ಯಾನರ್‌ಗಳನ್ನು ಪ್ರದರ್ಶಿಸಿ ವೈದ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಮೇಲೆ ಪೋಷಕರು ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ಪರಿಸ್ಥಿತಿ ನಿಯಂತ್ರಿಸಲು ಬಂದ ಅನ್ನಪೂರ್ಣೇಶ್ವರಿ ನಗರ ಪೊಲೀಸರ ವಿರುದ್ಧವೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಲೌಡ್ 9 ಆಸ್ಪತ್ರೆಗೆ ಆರೋಗ್ಯ ಇಲಾಖೆ ನೋಟಿಸ್
ಘಟನೆ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿದೆ. ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ನಡೆದಿರುವ ಆರೋಪ ಹಾಗೂ ಅರಿವಳಿಕೆ ಚಿಕಿತ್ಸೆಗೆ ಸಂಬಂಧಿಸಿದ ತಜ್ಞರ ವರದಿಯ ಹಿನ್ನೆಲೆಯಲ್ಲಿ ಕ್ಲೌಡ್ 9 ಆಸ್ಪತ್ರೆ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಈ ಘಟನೆ ಇದೀಗ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಆಸ್ಪತ್ರೆಗಳ ಚಿಕಿತ್ಸಾ ಕ್ರಮಗಳ ಕುರಿತು ಚರ್ಚೆಗೆ ಕಾರಣವಾಗಿದೆ.