ಕಾಲಿವುಡ್‌ನ ಮ್ಯೂಸಿಕ್ ಸೆನ್ಸೇಷನ್ ಅನಿರುದ್ಧ್ ರವಿಚಂದರ್ ಹಾಗೂ ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಾವ್ಯಾ ಮಾರನ್ ಮದುವೆ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ಇವರಿಬ್ಬರ ಮದುವೆಯ ಆರತಕ್ಷತೆಯದ್ದು ಎನ್ನಲಾದ ಆಹ್ವಾನ ಪತ್ರಿಕೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಿನಿಮಾ ಮತ್ತು ಕ್ರಿಕೆಟ್ ಲೋಕದ ಈ ಇಬ್ಬರು ಸೆಲೆಬ್ರಿಟಿಗಳ ಮದುವೆ ಸುದ್ದಿ ಈಗ ಹಾಟ್ ಟಾಪಿಕ್ ಆಗಿದೆ. ವೈರಲ್ ಮಾಹಿತಿಯ ಪ್ರಕಾರ, ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಅವರ ವಿವಾಹ ನವೆಂಬರ್ 10 ಮತ್ತು 11ರಂದು ಗ್ರೀಸ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಕುಟುಂಬಸ್ಥರು ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಗ್ರ್ಯಾಂಡ್ ವೆಡ್ಡಿಂಗ್ ನಡೆಯಲಿದ್ದು, ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮಾರನ್ ಕುಟುಂಬ ವಹಿಸಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಗ್ರೀಸ್‌ನಲ್ಲಿ ಮದುವೆಯಾದ ಬಳಿಕ ನವೆಂಬರ್ 21ರಂದು ಚೆನ್ನೈನಲ್ಲಿ ಅದ್ದೂರಿ ಆರತಕ್ಷತೆ ಆಯೋಜಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಗ್ರ್ಯಾಂಡ್ ರಿಸೆಪ್ಷನ್‌ಗೆ ರಾಜಕೀಯ, ಸಿನಿಮಾ ಹಾಗೂ ಉದ್ಯಮ ಕ್ಷೇತ್ರದ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ.
ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರ ಹೆಸರುಗಳು ವೈರಲ್ ಆಹ್ವಾನ ಪತ್ರಿಕೆಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ನಿರ್ಮಲಾ ಸೀತಾರಾಮನ್ ಹಾಗೂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಮಾಹಿತಿಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

ಇನ್ನು ಸಿನಿಮಾ ತಾರೆಯರ ವಿಚಾರಕ್ಕೆ ಬಂದರೆ, ಸೂಪರ್ ಸ್ಟಾರ್ ರಜನಿಕಾಂತ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ನಟ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸೇರಿದಂತೆ ಅನೇಕ ಸ್ಟಾರ್‌ಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಸಂಗೀತದ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿರುವ ಅನಿರುದ್ಧ್ ರವಿಚಂದರ್, ಕಾಲಿವುಡ್‌ನ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಸೂಪರ್‌ಹಿಟ್ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಅನಿರುದ್ಧ್ ಅವರ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿಯೇ ಕುತೂಹಲವಿದೆ.
ಮತ್ತೊಂದೆಡೆ ಕಾವ್ಯಾ ಮಾರನ್ ಕೂಡ ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿಚಿತ ಮುಖ. ಸನ್ ಟಿವಿ ನೆಟ್‌ವರ್ಕ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿಯಾಗಿರುವ ಕಾವ್ಯಾ, ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಐಪಿಎಲ್ ಪಂದ್ಯಗಳ ವೇಳೆ ಕಾವ್ಯಾ ಅವರ ಪ್ರತಿಕ್ರಿಯೆಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ಇದೀಗ ಮ್ಯೂಸಿಕ್ ಸ್ಟಾರ್ ಅನಿರುದ್ಧ್ ಹಾಗೂ ಕ್ರಿಕೆಟ್ ಲೋಕದ ಜನಪ್ರಿಯ ಮುಖ ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳ ಗಮನ ಸೆಳೆದಿದೆ. ಆದರೆ ಇಬ್ಬರ ಪ್ರೇಮ ಸಂಬಂಧ ಅಥವಾ ಮದುವೆ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ವೈರಲ್ ಆಗಿರುವ ವೆಡ್ಡಿಂಗ್ ಕಾರ್ಡ್‌ನ ಸತ್ಯಾಸತ್ಯತೆಯೂ ದೃಢಪಟ್ಟಿಲ್ಲ.
ಹೀಗಾಗಿ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ನಿಜವಾಗಿಯೂ ಮದುವೆಯಾಗುತ್ತಿದ್ದಾರಾ ಅಥವಾ ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮತ್ತೊಂದು ವದಂತಿಯೇ ಎಂಬುದಕ್ಕೆ ಅವರ ಕುಟುಂಬಗಳಿಂದಲೇ ಸ್ಪಷ್ಟನೆ ಸಿಗಬೇಕಿದೆ.