ವಾಷಿಂಗ್ಟನ್: ಇರಾನ್ನ ಪರಮಾಣು ಶಸ್ತ್ರಾಸ್ತ್ರ ತಯಾರಿಸುವ ಸಾಮರ್ಥ್ಯ ಶೇ.85ರಷ್ಟು ಕಡಿಮೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ಆದರೆ ಅಗತ್ಯಬಿದ್ದರೆ ಮತ್ತೆ ಮಿಲಿಟರಿ ಕ್ರಮ ಕೈಗೊಳ್ಳಲು ಅಮೆರಿಕದ ಪಡೆಗಳು ಸಂಪೂರ್ಣ ಸನ್ನದ್ಧವಾಗಿವೆ ಎಂದು ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್ನೊಂದಿಗೆ ಸಂಘರ್ಷವನ್ನು ಅಂತ್ಯಗೊಳಿಸಲು ರಾಜತಾಂತ್ರಿಕ ಮಾತುಕತೆ ಹಾಗೂ ಒತ್ತಡದ ತಂತ್ರಗಳು ಮುಂದುವರಿದಿರುವ ಸಂದರ್ಭದಲ್ಲೇ ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇರಾನ್ಗೆ ಟ್ರಂಪ್ ಎಚ್ಚರಿಕೆ
ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಮಾಧ್ಯಮವೊಂದರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ನ ಪರಮಾಣು ಶಸ್ತ್ರಾಸ್ತ್ರ ಉತ್ಪಾದನಾ ಸಾಮರ್ಥ್ಯ ಶೇ.85ರಷ್ಟು ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಇರಾನ್ ಪ್ರತಿನಿಧಿಗಳು ಅಮೆರಿಕದೊಂದಿಗೆ ಸೌಜನ್ಯದಿಂದ ಮಾತುಕತೆ ನಡೆಸುತ್ತಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಯುದ್ಧ ಅಂತ್ಯಗೊಳ್ಳುವ ಸಾಧ್ಯತೆಯಿದೆ ಎಂದಿರುವ ಟ್ರಂಪ್, ಅಮೆರಿಕ ಮಿಲಿಟರಿ ಕ್ರಮದ ಆಯ್ಕೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಭಾವಿಸಬಾರದು ಎಂದು ಎಚ್ಚರಿಸಿದ್ದಾರೆ.
“ಮತ್ತೆ ಯುದ್ಧದಲ್ಲಿ ಮಧ್ಯಪ್ರವೇಶಿಸಬೇಕಾದ ಪರಿಸ್ಥಿತಿ ಬಂದರೆ ಮಿಲಿಟರಿ ಕ್ರಮ ಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ. ನಮ್ಮ ಪಡೆಗಳು ಈಗಾಗಲೇ ಸಂಪೂರ್ಣ ಸನ್ನದ್ಧವಾಗಿವೆ. ಯಾವುದೇ ಕ್ಷಣದಲ್ಲೂ ಕಾರ್ಯಾಚರಣೆ ನಡೆಸಲು ಸಿದ್ಧವಾಗಿವೆ” ಎಂದು ಹೇಳಿದ್ದಾರೆ.
ಐದು ಗಲ್ಫ್ ರಾಷ್ಟ್ರಗಳ ಬೆಂಬಲದ ಬಗ್ಗೆ ಟ್ರಂಪ್ ಹೇಳಿಕೆ
ಇದರ ಬೆನ್ನಲ್ಲೇ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್ ಸೋಷಿಯಲ್’ನಲ್ಲಿ ಪ್ರತ್ಯೇಕ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಇರಾನ್ನಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚಿಸಿರುವುದಾಗಿ ಹೇಳಿದ್ದಾರೆ.
ಕತಾರ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್ ಮತ್ತು ಕುವೈತ್ ದೇಶಗಳು ಅಮೆರಿಕದ ನೌಕಾ ದಿಗ್ಬಂಧನ ಮುಂದುವರಿಯುವುದನ್ನು ಬಯಸುತ್ತಿವೆ ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ಹೊಸದಾಗಿ ಘೋಷಿಸಲಾದ ‘ಆಪರೇಷನ್ ಐರನ್ ಗೇಟ್’ ಕಾರ್ಯಾಚರಣೆಯೂ ಮುಂದುವರಿಯಬೇಕೆಂದು ಈ ರಾಷ್ಟ್ರಗಳು ಬಯಸುತ್ತಿವೆ ಎಂದು ತಿಳಿಸಿದ್ದಾರೆ. ಅಂದರೆ, ಭೂ ಮತ್ತು ಸಮುದ್ರ ಮಾರ್ಗಗಳ ಮೂಲಕ ಇರಾನ್ ಮೇಲಿನ ದಿಗ್ಬಂಧನ ಮುಂದುವರಿಸುವುದಕ್ಕೆ ಈ ದೇಶಗಳು ಬೆಂಬಲ ನೀಡುತ್ತಿವೆ ಎಂಬುದು ಟ್ರಂಪ್ ಹೇಳಿಕೆಯ ಸಾರಾಂಶವಾಗಿದೆ.