ಐಪಿಎಲ್ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಭವಿಷ್ಯದ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ತಂಡವನ್ನು ತೊರೆಯುವ ಇಂಗಿತವನ್ನು ಜೈಸ್ವಾಲ್ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಅವರನ್ನು ಬೇರೆ ಫ್ರಾಂಚೈಸಿಗೆ ವರ್ಗಾವಣೆ ಮಾಡುವ ಸಾಧ್ಯತೆಗಳ ಕುರಿತು ರಾಜಸ್ಥಾನ್ ರಾಯಲ್ಸ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಜೈಸ್ವಾಲ್ ಅವರನ್ನು ಪಡೆಯಲು ಕೆಲವು ಐಪಿಎಲ್ ತಂಡಗಳು ಆಸಕ್ತಿ ತೋರಿಸಿವೆ. ಉತ್ತಮ ಪ್ರಸ್ತಾಪಗಳು ಬಂದರೆ ರಾಜಸ್ಥಾನ್ ರಾಯಲ್ಸ್ ಅವರನ್ನು ಬಿಟ್ಟುಕೊಡುವ ಸಾಧ್ಯತೆಯೂ ಇದೆ. ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹರಾಜಿನ ಬಳಿಕವೂ ಅವರ ವರ್ಗಾವಣೆ ಪ್ರಕ್ರಿಯೆ ಮುಂದುವರಿಯಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಲಕ್ನೋ, ದೆಹಲಿ ತಂಡಗಳ ಮಾತುಕತೆ ವಿಫಲ
ಕಳೆದ ಎರಡು ತಿಂಗಳಿನಿಂದ ರಾಜಸ್ಥಾನ್ ರಾಯಲ್ಸ್ ಹಲವು ಫ್ರಾಂಚೈಸಿಗಳೊಂದಿಗೆ ಜೈಸ್ವಾಲ್ ಅವರ ವರ್ಗಾವಣೆ ಕುರಿತು ಮಾತುಕತೆ ನಡೆಸಿದೆ ಎನ್ನಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ರಿಟೆನ್ಷನ್ ಗಡುವಿನ ಕೊನೆಯವರೆಗೂ ಚರ್ಚೆ ನಡೆದಿತ್ತು. ಆದರೆ ಜೈಸ್ವಾಲ್ ಅವರನ್ನು ಬಿಟ್ಟುಕೊಡಲು ಪ್ರತಿಯಾಗಿ ರಾಜಸ್ಥಾನ್ ಕೇಳಿದ್ದ ಇಬ್ಬರು ಆಟಗಾರರನ್ನು ನೀಡಲು ಲಕ್ನೋ ಒಪ್ಪದ ಕಾರಣ ಮಾತುಕತೆ ಮುಂದುವರಿಯಲಿಲ್ಲ ಎಂದು ವರದಿಯಾಗಿದೆ.

ದೆಹಲಿ ಕ್ಯಾಪಿಟಲ್ಸ್ ಕೂಡ ಜೈಸ್ವಾಲ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿತ್ತು ಎನ್ನಲಾಗಿದೆ. ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಬಲ್ಲ ಆಟಗಾರನ ಹುಡುಕಾಟದಲ್ಲಿದ್ದ ದೆಹಲಿ, ರಾಜಸ್ಥಾನ್‌ಗೆ ಆಟಗಾರರ ವಿನಿಮಯದ ಪ್ರಸ್ತಾಪ ನೀಡಿತ್ತು. ಆದರೆ ಆ ಪ್ರಸ್ತಾಪದಿಂದ ರಾಜಸ್ಥಾನ್ ತೃಪ್ತಿಯಾಗದ ಕಾರಣ ಒಪ್ಪಂದ ಅಂತಿಮಗೊಂಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ನಾಯಕತ್ವದ ಬದಲಾವಣೆ ಬಳಿಕ ತಂಡದ ಲೆಕ್ಕಾಚಾರದಲ್ಲಿ ಬದಲಾವಣೆ?
2020ರಿಂದಲೂ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿರುವ ಯಶಸ್ವಿ ಜೈಸ್ವಾಲ್, ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಜೈಸ್ವಾಲ್ ಮತ್ತು ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಜೋಡಿ ಎದುರಾಳಿ ಬೌಲರ್‌ಗಳಿಗೆ ಸವಾಲಾಗಿತ್ತು.
ಆದರೆ ಕಳೆದ ಆವೃತ್ತಿಯಲ್ಲಿ ರಿಯಾನ್ ಪರಾಗ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದ ಬಳಿಕ ತಂಡದ ನಾಯಕತ್ವದ ಲೆಕ್ಕಾಚಾರದಲ್ಲಿ ಬದಲಾವಣೆ ಕಂಡುಬಂದಿದೆ. ಗಾಯದ ಸಮಸ್ಯೆಗಳ ನಡುವೆಯೂ ಪರಾಗ್ ನಾಯಕತ್ವದಲ್ಲಿ ರಾಜಸ್ಥಾನ್ ಉತ್ತಮ ಪ್ರದರ್ಶನ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ಆವೃತ್ತಿಯಲ್ಲೂ ಪರಾಗ್ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ ಎಂಬ ನಿರೀಕ್ಷೆಯಿದೆ.
ಈ ನಡುವೆ ಜೈಸ್ವಾಲ್ ತಂಡವನ್ನು ತೊರೆಯಲು ಬಯಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ತಂಡದ ವಾತಾವರಣದ ಬಗ್ಗೆ ಅವರಿಗೆ ಅಸಮಾಧಾನವಿದೆ ಎಂಬ ವರದಿಗಳೂ ಪ್ರಕಟವಾಗಿವೆ. ಆದರೆ ಈ ಕುರಿತು ಜೈಸ್ವಾಲ್ ಅಥವಾ ರಾಜಸ್ಥಾನ್ ರಾಯಲ್ಸ್ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ಜೈಸ್ವಾಲ್ ಮೇಲೆ ಮುಂಬೈ, ಕೆಕೆಆರ್ ಕಣ್ಣು?
ಜೈಸ್ವಾಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಆಸಕ್ತಿ ತೋರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ತಂಡವನ್ನು ಹೊಸದಾಗಿ ಕಟ್ಟುವ ಪ್ರಯತ್ನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಜೈಸ್ವಾಲ್ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.
ಆದರೆ ಈವರೆಗೆ ಯಾವುದೇ ತಂಡದೊಂದಿಗೆ ವರ್ಗಾವಣೆ ಒಪ್ಪಂದ ಅಂತಿಮಗೊಂಡಿಲ್ಲ. ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ಪರವೇ ಆಡಲಿದ್ದಾರೆಯೇ ಅಥವಾ ಹೊಸ ತಂಡದ ಜೆರ್ಸಿ ತೊಡಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.