ಗುಜರಾತ್: ಕುಟುಂಬದ ಜೊತೆ ಸಂತೋಷವಾಗಿ ಪ್ರಯಾಣಿಸುತ್ತಿದ್ದವರು ಕ್ಷಣಾರ್ಧದಲ್ಲೇ ಹೆಣವಾದ ದಾರುಣ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಏಳು ಮಂದಿ ಬಲಿಯಾಗಿದ್ದು, ಮೃತರಲ್ಲಿ ಮೂವರು ಪುಟ್ಟ ಕಂದಮ್ಮಗಳೂ ಸೇರಿದ್ದಾರೆ.
ಕಚ್ ಜಿಲ್ಲೆಯ ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ.
ವೇಕಾರಿಯಾ ರಣ್ ಸಮೀಪ ವೇಗವಾಗಿ ಬಂದ ಕಾರು ಹಾಗೂ ಟ್ರೈಲರ್ ಲಾರಿ ನಡುವೆ ಭೀಕರ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ.

ಅಪಘಾತದ ಭೀಕರತೆಗೆ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯಗಳು ಮನಕಲಕುವಂತಿದ್ದವು.
ಇನ್ನು ಮೃತರು ಉತ್ತರಾಖಂಡ ಮೂಲದ ಸೇನಾ ಯೋಧರೊಬ್ಬರ ಕುಟುಂಬದವರು ಎನ್ನಲಾಗಿದೆ. ಭುಜ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಸಿಬ್ಬಂದಿಯ ಕುಟುಂಬಸ್ಥರು ಮತ್ತು ಸಂಬಂಧಿಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಘಟನೆ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.